ಹಾಸನ: ಬೆಂಗಳೂರು- ಮಂಗಳೂರು
ಸಂಪರ್ಕಿಸುವ ಪ್ರಮುಖ ರಸ್ತೆ ಹಾದುಹೋಗುವ ಶಿರಾಡಿ ಘಾಟಿಯಲ್ಲಿ ನಿನ್ನೆ ರಾತ್ರಿ ಮತ್ತೆ ಭೂಕುಸಿತದಿಂದ ಮುಚ್ಚಿಹೋಗಿದ್ದ ಜಾಗವನ್ನು ವಾಹನಗಳು ಸಂಚರಿಸುವಷ್ಟು ತೆರವು ಮಾಡಲಾಗಿದೆ. ಆದರೆ ಭೂಕುಸಿತದ ಆತಂಕ ಇನ್ನೂ ಇದ್ದು, ವಾಹನ ಸವಾರರು ಜೀವಭಯದಿಂದಲೇ ಸಂಚರಿಸಬೇಕಿದೆ.
ಸಕಲೇಶಪುರದ ದೊಡ್ಡತಪ್ಲೆ ಭಾಗದಲ್ಲಿ ನಿನ್ನೆ ರಾತ್ರಿ ಮೂರನೇ ಬಾರಿಗೆ ಗುಡ್ಡ ಕುಸಿದಿತ್ತು. ಹಲವಾರು ವಾಹನಗಳು ಸಿಲುಕಿಕೊಂಡಿದ್ದವು ಅದೃಷ್ಟವಶಾತ್ ಜೀವಹಾನಿ ಆಗಿರಲಿಲ್ಲ. ಇಲ್ಲಿ ತಾತ್ಕಾಲಿಕವಾಗಿ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಎನ್‌ಹೆಚ್‌ಎಐನ ಅಧಿಕಾರಿಗಳು ಸ್ಥಳದಲ್ಲಿದ್ದು ರಸ್ತೆ ಮೇಲೆ ಕುಸಿತವಾಗಿರುವ ಮಣ್ಣನ್ನು ಮಾತ್ರ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಒಂದು ವಾರದ ಹಿಂದೆ ದೊಡ್ಡತಪ್ಲು ಬಳಿ ರಸ್ತೆಗೆ ಗುಡ್ಡದಿಂದ ಮಣ್ಣು ಕುಸಿಯಲು ಆರಂಭಿಸಿದೆ. ಆಗಲೇ ಸ್ಥಳೀಯರು ಎಚ್ಚರಿಸಿದ್ದರು. ಎರಡು ದಿನ ಹಿಂದೆ ಇಲ್ಲಿ ರಸ್ತೆಗೆ ಗುಡ್ಡ ದೊಡ್ಡ ಪ್ರಮಾಣದಲ್ಲಿ ಕುಸಿದಿತ್ತು. ಎರಡು ಕಾರುಗಳು, ಲಾರಿ ಹಾಗೂ ಟ್ಯಾಂಕರ್ ಸಿಲುಕಿಕೊಂಡಿದ್ದವು. ಪ್ರಯಾಣಿಕರನ್ನು ಪಾರು ಮಾಡಿ ವಾಹನಗಳನ್ನು ಈಚೆಗೆ ತೆಗೆಯಲಾಗಿತ್ತು. ನಿನ್ನೆ ಬೆಳಗ್ಗೆಯುಷ್ಟೇ ರಸ್ತೆ ಸಂಚಾರ ಮುಕ್ತಗೊಂಡಿತ್ತು. ನಿನ್ನೆ ಮಧ್ಯಾಹ್ನ ಕಂದಾಯ ಸಚಿವ ಕೃಷ್ಣಭೈರೇಗೌಡರು ಇಲ್ಲಿಗೆ ಭೇಟಿ ನೀಡಿ ಅವಲೋಕಿಸಿದ್ದರು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ನಂತರ ನಿನ್ನೆ ರಾತ್ರಿ ಇದೇ ಸ್ಥಳದಲ್ಲಿ ಮತ್ತೆ ಗುಡ್ಡ ಕುಸಿದಿದೆ. ಮಣ್ಣಿನಡಿ ಹಲವು ವಾಹನಗಳು ಸಿಲುಕಿಕೊಂಡವು. ಗುಡ್ಡ ಕುಸಿತದ ರಭಸಕ್ಕೆ ಕಂಟೇನರ್ ಒಂದು ಪಲ್ಟಿಯಾಗಿದೆ. ನಂತರ ಇಲ್ಲಿ ಪೂರ್ತಿಯಾಗಿ ರಸ್ತೆ ಸಂಚಾರ ಬಂದ್ ಮಾಡಿ ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಆದೇಶ ನೀಡಿದ್ದರು. ನಿರಂತರ ಗುಡ್ಡ ಕುಸಿಯುತ್ತಿರುವುದರಿಂದ ಜಿಲ್ಲಾಡಳಿತ ಈ ಆದೇಶ ನೀಡಿದ್ದು, ಬದಲಿ ಮಾರ್ಗದಲ್ಲಿ ಸಂಚಾರ ಮಾಡುವಂತೆ ಆದೇಶಿಸಿತ್ತು