ನಾಗ್ಪುರ: ಜನಸಂಖ್ಯೆ ಕುಸಿತದ ಬಗ್ಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ಸಮುದಾಯದ ಜನಸಂಖ್ಯೆಯು ಶೇ 2.1 ಕ್ಕಿಂತ ಕಡಿಮೆಯಾದರೆ ಅಂತಹ ಸಮಾಜವು ಅಳಿವಿನಂಚಿಗೆ ಹೋಗುತ್ತದೆ. ಹಾಗಾಗಿ ನಾವು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಬೇಕು. ಸಮಾಜದ ಉಳಿವಿಗೆ ಇದು ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಮೋಹನ್ ಭಾಗವತ್ ಅವರು ಈ ಹೇಳಿಕೆ ಸದ್ಯ ವೈರಲ್ ಆಗಿದ್ದು, ಸಾಕಷ್ಟು ಪರ-ವಿರೋಧ ವ್ಯಕ್ತವಾಗುತ್ತಿದೆ.
ಭಾನುವಾರ ನಾಗ್ಪುರದಲ್ಲಿ ನಡೆದ ‘ಕಥಲೆ ಕುಲ್ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ಸಮಾಜದ ಜನಸಂಖ್ಯೆಯು (ಫಲವತ್ತತೆ ದರ) 2.1 ಕ್ಕಿಂತ ಕಡಿಮೆಯಾದರೆ, ಆ ಸಮಾಜವು ಭೂಮಿಯಿಂದ ಕಣ್ಮರೆಯಾಗುತ್ತದೆ ಎಂದು ಆಧುನಿಕ ಜನಸಂಖ್ಯಾ ವಿಜ್ಞಾನವೇ ಹೇಳುತ್ತದೆ. ಈಗಾಗಲೇ ಈ ರೀತಿಯಲ್ಲಿ ಅನೇಕ ಭಾಷೆಗಳು ಮತ್ತು ಸಮಾಜಗಳು ಅಸ್ತಿತ್ವವನ್ನು ಕಳೆದುಕೊಂಡಿವೆ. ಹಾಗಾಗಿ ಜನಸಂಖ್ಯೆಯು 2.1 ಕ್ಕಿಂತ ಕಡಿಮೆ ಇರಬಾರದು ಎಂದು ಹೇಳಿದ್ದಾರೆ.