ವಿಜಯಪುರ: ವಕ್ಫ್ ಆಸ್ತಿಯನ್ನು ಅಲ್ಲಾಹನ ಆಸ್ತಿ ಎನ್ನುತ್ತೇವೆ ಎಂದು ಬಿಜೆಪಿ ವಿರುದ್ಧ ಸಚಿವ ಜಮೀರ್ ಅಹ್ಮದ್ ಕಿಡಿಕಾರಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಆಸ್ತಿಯನ್ನು ಅಲ್ಲಾಹನ ಆಸ್ತಿ ಎನ್ನುತ್ತೇವೆ. ಅದು ದಾನಿಗಳು ದಾನ ಮಾಡಿರುವ ಆಸ್ತಿ, ಯಾರೂ ಸರ್ಕಾರದಿಂದ ಕೊಟ್ಟಿರುವುದಲ್ಲ. ಬಿಜೆಪಿಯವರಿಗೆ ಮಾತನಾಡಲು ಯಾವುದೇ ವಿಷಯಗಳಿಲ್ಲ. ಇಷ್ಟು ದಿನ ಮುಡಾದ ಬಗ್ಗೆ ಮಾತನಾಡಿದರು. ಅದರಲ್ಲಿ ಏನೂ ಎಲ್ಲ ಎಂದು ಗೊತ್ತಾದ ಮೇಲೆ ಈಗ ವಕ್ಫ್‌ನ್ನು ಹಿಡಿದುಕೊಂಡಿದ್ದಾರೆ. ಕರ್ನಾಟಕದಲ್ಲಿ ಮೂರು ಕಡೆ ಉಪಚುನಾವಣೆ ನಡೆಯಲಿದೆ. ಜೊತೆಗೆ ಮಹಾರಾಷ್ಟ್ರ ಚುನಾವಣೆ ಇದೆ. ಆದ್ದರಿಂದ ರಾಜಕೀಯ ಗಿಮಿಕ್‌ಗೋಸ್ಕರ ಸುಮ್ಮನೇ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯ ಹೊನವಾಡದಲ್ಲಿ ಕೇವಲ 11 ಎಕರೆ ಮಾತ್ರ ಇದೆ. ಅಲ್ಲಿ 1,200 ಎಕರೆ ಇದೆ ಎಂದು ಹೇಳಿದ್ದಾರೆ. ವಕ್ಫ್ ವಿಚಾರದಲ್ಲಿ ಬಿಜೆಪಿಯವರು ಅನವಶ್ಯಕ ಗೊಂದಲ ಸೃಷ್ಟಿ ಮಾಡಿದ್ದಾರೆ. ಅಲ್ಲಿ ಯಾರಿಗೂ ನಾವು ನೋಟಿಸ್ ನೀಡಿಲ್ಲ. ಬಿಜೆಪಿ ಸರ್ಕಾರದಲ್ಲೂ ವಕ್ಫ್ ಆಸ್ತಿ ಅತಿಕ್ರಮಿಸಿದ ಸಾವಿರಾರು ಜನರಿಗೆ ನೋಟಿಸ್ ನೀಡಿದೆ. ವಕ್ಫ್‌ನಲ್ಲಿ ಒಂದು ಇಂಚು ಸರ್ಕಾರದ ಆಸ್ತಿ ಇಲ್ಲ. ವಕ್ಫ್ ಆಸ್ತಿ ಸಾಕಷ್ಟು ಒತ್ತುವರಿಯಾಗಿದೆ. ಅದನ್ನು ಸರಿಪಡಿಸುವ ಕೆಲಸ ನಾನು ಮಾಡುತ್ತಿದ್ದೇನೆ ಎಂದರು.
ಗೋಲಗುಂಬಜ್ ಅವರಿಗೆ ಬಿಟ್ಟು ಕೊಟ್ಟಿದ್ದೇವೆ. ಅದನ್ನು ಕೇಂದ್ರದವರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಅದಕ್ಕೆ ಬಿಟ್ಟುಕೊಟ್ಟಿದ್ದೇವೆ. ವಕ್ಫ್ ಆಸ್ತಿಯನ್ನ 90% ನಷ್ಟು ಮುಸ್ಲಿಮರೇ ಒತ್ತುವರಿ ಮಾಡಿಕೊಂಡಿದ್ದಾರೆ. ಆ ಆಸ್ತಿಯನ್ನ ಮರಳಿ ಪಡೆಯುವ ಕೆಲಸ ಮಾಡುತ್ತೇನೆ. ಒತ್ತುವರಿ ಮಾಡಿರುವವರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳಲ್ಲ ಎಂದು ತಿಳಿಸಿದರು