December 4, 2025
image_750x_692dd2daedcf5

ಬಂಟ್ವಾಳ: ಕಲ್ಲಡ್ಕದಲ್ಲಿ ಮದರಸ ಒಂದರ ಮುಖ್ಯ ಶಿಕ್ಷಕನ ಹುದ್ದೆ ನಿರ್ವಹಿಸುತ್ತಿದ್ದ ಲತೀಫ್‌ ದಾರಿಮಿ ಎಂಬಾತನ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ಪ್ರಕರಣ ದಾಖಲಾದ ಬಗ್ಗೆ ವರದಿಯಾಗಿದೆ.

ಕಲ್ಲಡ್ಕದ ಜುಮಾ ಮಸೀದಿ ಸಮಿತಿ ಒಂದರ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮದರಸದಲ್ಲಿ ಮುಖ್ಯ ಶಿಕ್ಷಕನಾಗಿದ್ದ ಆರೋಪಿ ಪ್ರಸ್ತುತ ಪರಾರಿಯಾಗಿದ್ದಾನೆ. ಬಲ್ಲ ಮೂಲಗಳ ಪ್ರಕಾರ ಆತ ಬೆಂಗಳೂರಿನಲ್ಲಿದ್ದಾನೆ ಎನ್ನಲಾಗಿದೆ.

ಪ್ರಕರಣ ಬೆಳಕಿಗೆ ಬಂದು ಮದರಸದಿಂದ ವಜಾಗೊಂಡ ನಂತರ ಬೊಳ್ಳಾಯಿ ಎಂಬಲ್ಲಿ ಮನೆಯೊಂದರಲ್ಲಿ ಅವಿತುಕೊಂಡಿದ್ದ ಆತ, ಇಂದು ಉನ್ನತ ಮಟ್ಟದ ಪೋಲೀಸರ ತಂಡ ಮಹಜರು ಪ್ರಕ್ರಿಯೆಗೆ ಸಂತ್ರಸ್ಥೆಯ ಮನೆ, ಮಸೀದಿ, ಮದರಸಗಳಿಗೆ ಭೇಟಿ ನೀಡುವ ಖಚಿತ ವಿವರವನ್ನರಿತು ಬೆಂಗಳೂರು ಕಡೆಗೆ ಪಲಾಯನಗೈದಿದ್ದಾನೆ ಎನ್ನಲಾಗಿದೆ.

ಆತನನ್ನು ಬಂಧಿಸಲು ಪೊಲೀಸ್ ಅಧಿಕಾರಿಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಪ್ರಕರಣದ ವಿವರ:

ಬೆಳ್ತಂಗಡಿ ತಾಲೂಕಿನ ಸುನ್ನತ್‌ ಕೆರೆ ನಿವಾಸಿಯಾದ ಲತೀಫ್‌ ಎಂಬಾತ ಕಳೆದ ಮೂರು ವರ್ಷಗಳ ಹಿಂದೆ ತಾನು ದಾರಿಮಿ ಬಿರುದುದಾರ ಎಂದು ಪರಿಚಯಿಸಿಕೊಂಡು (ಈತನ ದಾರಿಮಿ ಬಿರುದು ನಕಲಿ ಎನ್ನಲಾಗುತ್ತಿದೆ) ಕಲ್ಲಡ್ಕದ ಮದ್ರಸದಲ್ಲಿ ಮುಖ್ಯ ಅಧ್ಯಾಪಕ ಹುದ್ದೆಯನ್ನು ಗಿಟ್ಟಿಸಿಕೊಳ್ಳುತ್ತಾನೆ. ನಂತರ ತನ್ನದೇ ಮದ್ರಸದಲ್ಲಿ ಕಲಿಯುತ್ತಿರುವ ಅಪ್ರಾಪ್ತ ಬಾಲಕಿಯರನ್ನು ತನ್ನ ಕೆಟ್ಟ ಕಣ್ಣುಗಳಿಂದ ಕಾಣಲಾರಂಭಿಸಿದ್ದಾನೆ. ಪ್ರಕರಣದಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿರುವ ಸುಮಾರು 15 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕಿ ಸಂತ್ರಸ್ತೆಯಾಗಿದ್ದಾಳೆ.

ಪ್ರಕರಣ ಬೆಳಕಿಗೆ ಬಂದ ನಂತರ ಬಾಲಕಿ ಎಂದಿನಂತೆ ಶಾಲೆಗೆ ಹೋದಾಗ ಶಾಲಾ ಅಧ್ಯಾಪಕರಿಗೆ ವಿಷಯ ತಿಳಿದು ಅವರ ಮುಖಾಂತರ ಪ್ರಕರಣ ಮಕ್ಕಳ ಸಂರಕ್ಷಣಾ ಸಮಿತಿ ಪೋಲೀಸರವರೆಗೂ ತಲುಪಿದೆ ಎಂದು ತಿಳಿದು ಬಂದಿದೆ.

ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಮತ್ತು ಅಪ್ರಾಪ್ತ ವಯಸ್ಕ ಹುಡುಗಿಗೆ ಮಕ್ಕಳ ರಕ್ಷಣಾ ಅಧಿಕಾರಿಗಳಿಂದ ಕೌನ್ಸೆಲಿಂಗ್ ಮಾಡಲಾಗಿದೆ.