✍️ಸುಹೈಲ್ ಮಾರಿಪಳ್ಳ
ಕೇರಳದ ವಯನಾಡ್ ಜಿಲ್ಲೆಯ ಮುಂಡಕ್ಕೈ, ಚೂರಲ್ಮಲಾ, ಅಟ್ಟಮಲಾ ಪ್ರದೇಶಗಳಲ್ಲಿ ಸಂಭವಿಸಿದ ಭೀಕರ ಭೂಕುಸಿತ, ಜಳಪ್ರಳಯ ಸುಮಾರು 500ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ. ಈ ಘಟನೆ ದೇಶದ ಅತಿ ದೊಡ್ಡ ದುರಂತಗಳಲ್ಲಿ ಒಂದಾಗಿದೆ.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ತಂಡಗಳು, ಜಿಲ್ಲಾಡಳಿತದ ಸಿಬ್ಬಂದಿ, ಹಲವಾರು ಸಂಘ-ಸಂಸ್ಥೆಗಳ ಸ್ವಯಂ ಸೇವಕರೂ ಮತ್ತು ಸ್ಥಳೀಯರು ರಕ್ಷಣೆ ಮತ್ತು ಪರಿಹಾರ ಕಾರ್ಯಗಳಲ್ಲಿ ತೊಡಗಿದ್ದಾರೆ. ಇನ್ನೂ ಹಲವು ಮೃತದೇಹಗಳು ಸಿಗುತ್ತಿದೆ ಮತ್ತು ಸಿಗಲು ಬಾಕಿ ಇದೆ. ಕೇರಳದ ಜೊತೆ ಕೈ ಜೋಡಿಸಿದ
ತಮಿಳುನಾಡು, ಕರ್ನಾಟಕ ತುರ್ತು ಪರಿಹಾರ ಕ್ರಮಗಳನ್ನು ಕೈಗೊಂಡಿದೆ.
ದುರಂತದಲ್ಲಿ ಬದುಕುಳಿದವರು ತಮಗೆ ಆದ ಅನುಭವವನ್ನು ಹಂಚುತ್ತಿರುವಾಗ,ಮಾಧ್ಯಮದ ಮುಂದೆ ಕಣ್ಣೀರು ಹಾಕುವಾಗ ನಮಗೂ ಕಣ್ಣು ಹನಿಯಾಗುತ್ತದೆ.
ಈ ಮಧ್ಯೆ ಮನಸು, ಹೃದಯಗಳು ವಿಷಮಯವಾದ ವಿಕೃತರ ಅಟ್ಟಹಾಸ ವಿಜೃಂಭಿಸುತ್ತಿದೆ. ರಾಹುಲ್ ಗಾಂಧಿ ಅವರನ್ನು ಗೆಲ್ಲಿಸಿ ಸಂಸದರಾನ್ನಾಗಿ ಮಾಡಿದ್ದಕ್ಕೆ ವಯನಾಡಿನ ಜನರಿಗೆ ದೇವರು ಶಿಕ್ಷೆ ಕೊಟ್ಟಿದ್ದಾನಂತೆ. ಕೇರಳದ ಜನರು ಕ್ರೂರಿಗಳಂತೆ, ಅದಕ್ಕೆ ಕರ್ಮ ಅವರಿಗೆ ತಿರುಗಿಸಿಕೊಟ್ಟಿದೆಯಂತೆ.
ಇಷ್ಟೇ ಅಲ್ಲ, ವಯನಾಡಿನಲ್ಲಿ ತಾಯಂದಿರರನ್ನು ಕಳೆದುಕೊಂಡಿರುವ ಹಸುಗೂಸುಗಳಿದ್ದರೆ ಹಾಲುಣಿಸಲು ನನ್ನ ಹೆಂಡತಿ ರೆಡಿ ಇದ್ದಾಳೆ ಅಂತ ಒಬ್ಬ ಯುವಕ ಹೇಳಿಕೊಂಡಾಗ ದುಷ್ಟನೊಬ್ಬ, ನನಗೆ ಆ ಎದೆಹಾಳು ಬೇಕು ಅಂತ ತನ್ನ ವಿಕೃತಿಯನ್ನು ತೋರಿಸಿದ್ದಾನೆ.
ದುರಂತದ ಬಗ್ಗೆ ಸಂಭ್ರಮಿಸೋದನ್ನು ನೋಡಿದರೆ ಅವರನ್ನು ಮನುಷ್ಯರು ಎಂದು ಒಪ್ಪಿಕೊಳ್ಳಲು ಯಾರಿಗೂ ಸಾಧ್ಯವಾಗಲ್ಲ..
ಕೇರಳ ರಾಜ್ಯ ಇವರ ಪಕ್ಷವನ್ನು ತಿರಸ್ಕರಿಸಿರುವ ದ್ವೇಷದ ಕಾರಣಕ್ಕೆ ಅತೃಪ್ತ ಆತ್ಮಗಳು ವಯನಾಡಿನ ದುರಂತವನ್ನು ಸಂಭ್ರಮಿಸುತ್ತಿದ್ದಾರೆ.
ಈ ನಡುವೆ ಅಜ್ಜಿ, ಮೊಮ್ಮಗಳ ಜೀವನ ರಕ್ಷಣೆಗೆ ಕಾವಲಾಗಿ ನಿಂತ ಆನೆಯ ಕಥೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸುಜಾತ ಅವರು ಟೀ ಎಸ್ಟೇಟ್ ನ ಕೆಲಸಗಾರ್ತಿಯಾಗಿದ್ದರು. ಭೂಕೂಸಿತ ಆಗಿ ಎಲ್ಲವನ್ನೂ ಕಳೆದುಕೊಂಡು ಒಂಟಿಯಾಗಿ ನಿಂತಾಗ ಇವರಿಗೆ ಕಾವಲಾಗಿ ನಿಂತಿದ್ದ ಮೂಲಕ ಪ್ರಾಣಿಯ ಕುರಿತಾಗಿ ಹೇಳಿಕೊಂಡಿದ್ದಾರೆ.
ಸೋಮವಾರ ರಾತ್ರಿ 4 ಗಂಟೆಗೆ ನಮ್ಮ ಮೇಲೆ ಮನೆ ಕುಸಿದು ಬಿತ್ತು. ನಾನು ಇಟ್ಟಿಗೆ ರಾಶಿಯನ್ನು ಜಾಗ ಮಾಡಿಕೊಂಡು ಮಗಳು, ಮೊಮ್ಮಗಳು ಅಳಿಯ ಎಲ್ಲರೂ ಹೊರಗೆ ಬಂದು ಬೆಟ್ಟದ ಕಡೆ ಓಡ ತೊಡಗಿದ್ದೇವು ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.
ಅಲ್ಲಿಂದ ತಪ್ಪಿಸಿಕೊಂಡು ಕಾಡಿನ ಕಡೆಗೆ ಬಂದ್ರೆ ಅಲ್ಲಿ ನಮಗೆ ಎದುರಾಗಿ ಕಾಡಾನೆ ಸಿಕ್ಕಿತು. ನಮ್ಮ ಜೀವವೆ ಮತ್ತೆ ಹೋದಂತೆ ಆಗಿತ್ತು. ದೊಡ್ಡ ದುರಂತದಿಂದ ತಪ್ಪಿಸಿಕೊಂಡು ಬಂದಿದ್ದೀವಿ. ನೀನು ನಮಗೇನೂ ಮಾಡಬೇಡಪ್ಪಾ. ಕತ್ತಲೂ ಇದೆ, ಎಲ್ಲವನ್ನೂ ಕಳೆದುಕೊಂಡು ಬಂದಿದ್ದೇವೆ ಎಂದು ನಾನು ಆನೆಯ ಮುಂದೆ ನಿಂತು ಕಣ್ಣೀರು ಹಾಕಿದೆ. ಆನೆಯ ಕಣ್ಣಿನಿಂದಲೂ ನೀರು ಬಂತು. ರಾತ್ರಿ ಬೆಳಗಾಗುವವರೆಗೆ ನಾವು ಆನೆಯ ಕಾಲ ಹತ್ತಿರವೇ ಸಮಯ ಕಳೆದೆವು. ಬೆಳಗ್ಗೆ 6 ಗಂಟೆಯಾದಾಗ ಎಲ್ಲಿಂದಲೋ ಜನರು ಬಂದರು. ನಮ್ಮನ್ನು ಕಾಪಾಡಲು ನಮ್ಮ ಊರಿನವರು ಯಾರೂ ಬದುಕುಳಿದಿರಲಿಲ್ಲ. ಅಮೇಲೆ ದೂರದೂರಿನಿಂದ ಬಂದ ಜನರು ನಮ್ಮನ್ನು ಕಾಪಾಡಿ ಸುರಕ್ಷಿತ ಜಾಗಕ್ಕೆ ತಲುಪಿಸಿದ್ದಾರೆ ಎಂದು ಹೇಳುತ್ತಾ ಮೂಕ ಪ್ರಾಣಿಯ ಮಾನವೀಯತೆ ನೆನೆದು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಈ ಸ್ಟೋರಿ ಇದೀಗ ವೈರಲ್ ಆಗಿದ್ದು, ಕಾಡಾನೆಯ ಮಾನವೀಯ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಈ ನಡುವೆ ಕೆಲವು ರಾಜಕೀಯ, ಕೋಮುವೈಷಮ್ಯ, ಅಮಾನವೀಯ ವರ್ತನೆಗಳು ಕೂಡ ನಡೆಯುತ್ತಿದೆ. ಅನೇಕ ಅಮಾನವೀಯರು ಸಾಮಾಜಿಕ ಜಾಲತಾಣಗಳ ಪೋಸ್ಟ್, ಕಾಮೆಂಟ್‌ಗಳ ಮೂಲಕ ಪ್ರಕೃತಿ ದುರಂತಕ್ಕೆ ಕೋಮು ವಿಷ ತಾಕಿಸಿ ವಿಘ್ನ ಸಂತೋಷಪಡುತ್ತಿದ್ದಾರೆ. ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಶೇರ್ ಮಾಡುತ್ತಿದ್ದಾರೆ.