August 4, 2025
IMG-20250803-WA0231

ಬೆಂಗಳೂರು: ಮನೆಕೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಗೆ ಜೀವಾವಧಿ ಶಿಕ್ಷೆ ವಿಧಿಸಿರುವ ನ್ಯಾಯಾಲಯ ದ ತೀರ್ಪನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಸ್ವಾಗತಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ವಿಮ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ, ಲೈಂಗಿಕ ಶೋಷಣೆಗೆ ಒಳಗಾದ ಸಂತ್ರಸ್ತೆಯರು ನ್ಯಾಯದ ನಿರೀಕ್ಷೆಯನ್ನು ಕಳೆದುಕೊಳ್ಳುತ್ತಿರುವಂತಹ ಪ್ರಸ್ತುತ ದಿನಗಳಲ್ಲಿ ಓರ್ವ ಪ್ರಭಾವೀ ರಾಜಕಾರಣಿಯ ವಿರುದ್ಧದ ಈ ಮಹತ್ವದ ತೀರ್ಪು ಮರುಭೂಮಿಯಲ್ಲಿ ಸಿಕ್ಕ ಓಯಸಿಸ್ ನಂತೆ ಭಾಸವಾಗುತ್ತಿದೆ.ಯಾವುದೇ ರಾಜಕೀಯ ತಂತ್ರ ಕುತಂತ್ರಗಳಿಗೆ ಒಳಗಾಗದೆ ನ್ಯಾಯವನ್ನು ಎತ್ತಿ ಹಿಡಿದು ಜೀವಾವಧಿ ಶಿಕ್ಷೆಯನ್ನು ವಿಧಿಸಿರುವುದು ಸಂತ್ರಸ್ತ ಹೆಣ್ಣಿಗೆ ಸ್ವಾಭಿಮಾನದ ಬದುಕು ನೀಡಿದಂತಾಗಿದೆ. ಇಂತಹ ನ್ಯಾಯದ ಭರವಸೆಗಳನ್ನಾಗಿದೆ ಶೋಷಿತ ಮಹಿಳಾ ಸಮೂಹ ಎದುರು ನೋಡುತ್ತಿರುವುದು.


ಅಧಿಕಾರ ಬಲವನ್ನು ದುರುಪಯೋಗಪಡಿಸಿಕೊಂಡು ಅಸಹಾಯಕ ಮಹಿಳೆಯನ್ನು ಶಾರೀರಿಕವಾಗಿ, ಮಾನಸಿಕವಾಗಿ ಶೋಷಣೆಗೆ ಒಳಪಡಿಸುವ ಪ್ರತಿಯೋರ್ವ ಅಪರಾಧಿಗೂ ಈ ತೀರ್ಪು ಪಾಠವಾಗಬೇಕು. ಆರ್ಥಿಕವಾಗಿ, ರಾಜಕೀಯವಾಗಿ ಬಲಾಢ್ಯರೆನಿಸಿಕೊಂಡ ಆರೋಪಿಗಳ ವಿರುದ್ಧ ಕೆಳಸ್ತರದ ಮಹಿಳೆ ಕೂಡ ನ್ಯಾಯ ಸಮ್ಮತ ಹೋರಾಟ ನಡೆಸಿ ಗೆಲುವು ಸಾಧಿಸಬಹುದೆಂಬ ಆತ್ಮ ವಿಶ್ವಾಸ ಉಂಟಾಗಿದೆ .


ಆರಂಭದಿಂದಲೂ ಸಂತ್ರಸ್ತೆಯ ಜೊತೆ ನಿಂತು ಆಕೆಗೆ ನ್ಯಾಯ ಒದಗಿಸಿದ ಎಸ್ಐಟಿ ತಂಡದ ಕಾರ್ಯವೂ ಶ್ಲಾಘನೀಯವಾಗಿದೆ ಎಂದು ಹೇಳಿದರು.


ಇನ್ನು ಯಾವುದೇ ರೀತಿಯ ತಡೆಯಾಜ್ಞೆಗಳು ಬಾರದೆ ವಿಧಿಸಿರುವ ತೀರ್ಪು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿ.
ದೌರ್ಜನ್ಯಕ್ಕೆ ಒಳಗಾದ ಎಲ್ಲಾ ಮಹಿಳೆಯರಿಗೂ ಸಮಾನ ನ್ಯಾಯ ದೊರಕಲಿ ಎಂದು ಅವರು ಆಗ್ರಹಿಸಿದರು.