ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅಭೂತಪೂರ್ವ ಜಯ ಸಾಧಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಇದರ ಬೆನ್ನಲ್ಲೇ ವಿಜಯದ ಮೊದಲ ಭಾಷಣ ಮಾಡಿರುವ ಟ್ರಂಪ್, ಅಮೆರಿಕಕ್ಕೆ ಮತ್ತೆ “ಸುವರ್ಣಯುಗ” ತರುವುದಾಗಿ ವಾಗ್ದಾನ ಮಾಡಿದರು.
ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ನೀಡಿದ್ದೀರಿ. ಈ ಜನಾದೇಶದೊಂದಿಗೆ ಅಮೆರಿಕವನ್ನು ಮತ್ತೆ ಸುವರ್ಣಯುಗದ ಹಳಿಗೆ ತರುವೆ. ದೇಶವನ್ನು ಮತ್ತೊಮ್ಮೆ ಶ್ರೇಷ್ಠವಾಗಿಸಲು ಪ್ರತಿಕ್ಷಣವೂ ಪ್ರಯತ್ನಿಸುವೆ ಎಂದು ಫ್ಲೋರಿಡಾದ ಪಾಮ್ ಬೀಚ್‌ನಲ್ಲಿರುವ ಪಾಮ್ ಬೀಚ್ ಕನ್ವೆನ್ಷನ್ ಸೆಂಟರ್‌ನಲ್ಲಿ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದರು.
“ಇದು ಹಿಂದೆಂದೂ ನೋಡಿರದಂತಹ ರಾಜಕೀಯ ಹೋರಾಟವಾಗಿದೆ. ನಾನು ಕಂಡ ಅತಿ ಕಠಿಣ ಚುನಾವಣೆಯಾಗಿದೆ. ಬಹುಶಃ ಇದು ದೇಶದ ಇತಿಹಾಸದಲ್ಲೂ ಮೊದಲಿದ್ದರೂ ಅಚ್ಚರಿಯೇನಲ್ಲ. ನೀವು ನೀಡಿದ ವಿಜಯದಿಂದ ದೇಶವನ್ನು ಕಟ್ಟಲು ಸಹಾಯಕವಾಗಲಿದೆ ಎಂದರು.
ಸಮೃದ್ಧ ದೇಶ ಕಟ್ಟುವೆ: ಇದು ನನ್ನ ಜೀವನದ ಅತ್ಯಂತ ಪ್ರಮುಖ ಗಳಿಗೆಯಾಗಿದೆ. ನನ್ನ ಸರ್ವಸ್ವವನ್ನು ಅಮೆರಿಕಕ್ಕೆ ಸಮರ್ಪಿಸುವೆ. ದೇಶದ ಪ್ರತಿ ನಾಗರಿಕ, ಕುಟುಂಬಕ್ಕಾಗಿ ಮತ್ತು ನಮ್ಮ ಭವಿಷ್ಯಕ್ಕಾಗಿ ಹೋರಾಟ ಮಾಡುತ್ತೇವೆ. ಪ್ರತಿದಿನ, ನಾನು ಉಸಿರಾಡುವವರೆಗೆ ನಿಮಗಾಗಿ ಹೋರಾಡುವೆ. ಮುಂದಿನ ಪೀಳಿಗೆಗೆ ಅರ್ಹವಾದ, ಸುರಕ್ಷಿತ ಮತ್ತು ಸಮೃದ್ಧ ದೇಶವನ್ನು ಕಟ್ಟಿಕೊಡಲು ಶ್ರಮಿಸುವೆ ಎಂದು ಭರವಸೆ ನೀಡಿದರು.