ಉಡುಪಿ : ನಿನ್ನೆ ಸಂಜೆ ಹೆಜಮಾಡಿ ಟೋಲ್ ಗೇಟ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಆರೋಪಿಯನ್ನು ಪಡುಬಿದ್ರೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಹಲ್ಲೆ ಮಾಡಿರುವ ವಿಡಿಯೋ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಅದರ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಆಲಂಪಾಡಿ ನಿವಾಸಿಯಾದ ಸಲೀಂ ಬಂಧಿತ ಆರೋಪಿಯಾಗಿದ್ದಾನೆ. ಹೆಜಮಾಡಿ ಟೋಲ್ ಗೇಟ್ ನ ಬಿಲ್ ಕಲೆಕ್ಟರ್ ದೀಕ್ಷಿತ್ ಹಲ್ಲೆಗೊಳಗಾದವರು. ಮಂಗಳವಾರ ಬೆಳಗ್ಗೆ ಮುಲ್ಕಿ ಕಡೆಯಿಂದ ಕಾರಿನಲ್ಲಿ ಹೆಜಮಾಡಿ ಟೋಲ್ ಗೇಟ್ ಗೆ ಬಂದ ಸಲೀಂ, ಟೋಲ್ ವಿನಾಯಿತಿ ಕೋರಿದ್ದಾನೆ. ವಿನಾಯಿತಿ ನೀಡಲು ಅವಕಾಶ ಇಲ್ಲ ಎಂದು ಬಿಲ್ ಕಲೆಕ್ಟರ್ ದೀಕ್ಷಿತ್ ಹೇಳಿದಾಗ ಕಾರನ್ನು ಅಪಾಯಕಾರಿಯಾಗಿ ಮುಂದಕ್ಕೆ ಚಲಾಯಿಸಿದ್ದಾನೆ. ಅಲ್ಲದೆ ಕಾರಿನಿಂದ ಇಳಿದು ಅವ್ಯಾಚವಾಗಿ ನಿಂದಿಸಿ ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ದೀಕ್ಷಿತ್ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪಡುಬಿದ್ರೆ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.