ಕಾವೂರು: ಕೂಳೂರು ಸೇತುವೆ ಮೇಲೆ ಕಾರು ಇಟ್ಟು ನಾಪತ್ತೆಯಾಗಿದ್ದ ಉದ್ಯಮಿ ಬಿ.ಎಂ.ಮಮ್ತಾಝ್ ಅಲಿ ಅವರ ಮೃತದೇಹ ಸೋಮವಾರ ಕೂಳೂರು ಸೇತುವೆಯ ಬಳಿ ಪತ್ತೆಯಾಗಿದೆ.
ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್, ಕೋಸ್ಟ್ ಗಾರ್ಡ್ ಸೇರಿದಂತೆ ಸ್ಥಳೀಯ ನಾಡದೋಣಿ ಮೀನುಗಾರರು ಸೋಮವಾರ ಬೆಳಗ್ಗೆ 6 ಗಂಟೆಯಿಂದ ಹುಡುಕಾಟದಲ್ಲಿ ತೊಡಗಿದ್ದರು.
ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅಗರ್ವಾಲ್ ಭೇಟಿ ನೀಡಿದ್ದಾರೆ. ನದಿಯಲ್ಲಿ ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ತಂಡಗಳಿಂದ ನಿನ್ನೆಯಿಂದ ತಪಾಸಣೆ ನಡೆಸಲಾಗಿತ್ತು. ಆದರೆ ಇಂದು ನದಿಯಲ್ಲಿ ಮುಮ್ತಾಜ್ ಅಲಿ ಶವ ಪತ್ತೆಯಾಗಿದೆ
ಆರು ಮಂದಿ ವಿರುದ್ಧ ಎಫ್‌ಐಆರ್ ದಾಖಲು!
ಶಂಕೆ ವ್ಯಕ್ತಪಡಿಸಿ ಅವರ ಸಹೋದರ ಹೈದರ್ ಅಲಿ ಎಂಬವರು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಹಿಳೆಯನ್ನು ಬಳಸಿಕೊಂಡು ದುರುದ್ದೇಶದಿಂದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿಲಾಗಿದೆ. ರೆಹಮತ್ , ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶುಐಬ್, ಸತ್ತಾರ್ ಅವರ ಕಾರು ಚಾಲಕ ಸಿರಾಜ್ ಎಂಬವರ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನನ್ನ ಸಹೋದರ ಮುಮ್ತಾಝ್ ಅಲಿ ಸಮಾಜದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದು, ಕಳೆದ 30 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿದ್ದರು. ಸಮಾಜ ಸೇವೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಹಲವು ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರಾಗಿದ್ದು, ಅವರ ಪ್ರಸಿದ್ಧಿಯನ್ನು ಹಾಳು ಮಾಡುವ ಉದ್ದೇಶದಿಂದ ಆರೋಪಿಗಳೆಲ್ಲರೂ ಸೇರಿಕೊಂಡು ಅವರು ಆತ್ಮಹತ್ಯೆಗೆ ಶರಣಾಗುವಂತೆ ಪ್ರಚೋದನೆ ನೀಡಿದ್ದಾರೆ ಎಂದು ಹೈದರ್ ಅಲಿ ದೂರಿನಲ್ಲಿ ಉಲ್ಲೇಖಸಿದ್ದಾರೆ. ಆರೋಪಿಗಳ ಪೈಕಿ ರೆಹಮತ್ ಎಂಬವರು ಅಕ್ರಮ ಸಂಬಂಧ ಇದೆ ಎಂದು ಸುಳ್ಳು ಪ್ರಚಾರ ಮಾಡಿ ಹೆಸರನ್ನು ಹಾಳು ಮಾಡುತ್ತೇನೆ ಎಂದು ಹೆದರಿಸಿ 2024 ರ ಜುಲೈ ಯಿಂದ ಇದುವರೆಗೂ 50 ಲಕ್ಷ ರೂ.ಗಿಂತಲು ಅಧಿಕ ಮೊತ್ತವನ್ನು ವಸೂಲಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಬೆದರಿಸಿ 25 ಲಕ್ಷ ರೂ. ಹಣವನ್ನು ಚೆಕ್ ಮೂಲಕ ಪಡೆದುಕೊಂಡಿದ್ದಾರೆ ಎಂದು ಹೈದರ್ ಅಲಿ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳು ಈ ಮೊದಲು ಮುಮ್ತಾಝ್ ಅಲಿಯವರಿಗೆ ದೈಹಿಕವಾಗಿ ಹಲ್ಲೆ ಮಾಡಿರುವ ಬಗ್ಗೆಯೂ ದೂರಿನಲ್ಲಿ ತಿಳಿಸಿರುವ ಅವರು, ಸತ್ತಾರ್ ಎಂಬಾತ ಮುಮ್ತಾಝ್ ಅಲಿ ಅವರ ರಾಜಕೀಯ ವಿರೋಧಿಯಾಗಿದ್ದು, ಅವರನ್ನು ರಾಜಕೀಯವಾಗಿಯೂ ಮುಗಿಸಬೇಕೆಂದು ರೆಹಮತ್ ಅವರೊಂದಿಗೆ ಸೇರಿಕೊಂಡು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಲಾಗಿದೆ. ರೆಹಮತ್ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಇದೆ ಎಂದು ಪ್ರಚಾರ ಮಾಡುವುದಾಗಿ ಬೆದರಿಸಿ, ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಾ, ನಿರಂತರ ಕಿರುಕುಳ ನೀಡಿ ಹಣವನ್ನು ನೀಡದಿದ್ದರೆ ಕೊಲೆ ಮಾಡುವುದಾಗಿ ಆರೋಪಿಗಳು ಹೆದರಿಸಿದ್ದರು. ಕುಟುಂಬದ ಸದಸ್ಯರಿಗೂ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.