ಬಂಟ್ವಾಳ : ಅಮ್ಮುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಡೈಕೋಡಿ ಗ್ರಾಮದ ರಸ್ತೆಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಹಿಳೆಯರು, ಶಾಲಾ ಮಕ್ಕಳು, ವಯೋವೃದ್ಧರು ಒಬ್ಬಂಟಿಯಾಗಿ ಓಡಾಡಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆಯಲ್ಲಿ ಹತ್ತಾರು ಬೀದಿ ನಾಯಿಗಳು ಕಂಡುಬರುತ್ತಿವೆ. ಹೀಗಾಗಿ ಸಾರ್ವಜನಿಕರು ರಸ್ತೆಯಲ್ಲಿ ನಡೆಯಲಾಗದ ಸ್ಥಿತಿ ನಿರ್ಮಾಣಗೊಂಡಿದೆ. ಬೀದಿ ನಾಯಿಗಳು ಶಾಲೆಗೆ ಹೋಗುವ ಮಕ್ಕಳನ್ನು ಓಡಿಸುವುದು, ಸ್ಕೂಟರ್ ಸವಾರರ ಮೇಲೆ ದಾಳಿ, ಬೆನ್ನಟ್ಟುವ ಘಟನೆಗಳು ಹೆಚ್ಚುತ್ತಿವೆ.
ಮಕ್ಕಳ ಮೇಲೆ ನಾಯಿಗಳ ದಾಳಿ ನಡೆದಾಗ, ಆ ಸಂದರ್ಭದಲ್ಲಿ ಸಾರ್ವಜನಿಕ ಕೂಗು ಎದ್ದಾಗ ದಿಢೀರ್ ಎಂದು ಕ್ರಮದ ಭರವಸೆ ನೀಡುವ ಗ್ರಾಮ ಪಂಚಾಯತ್ ಅಧಿಕಾರಿಗಳು ಆನಂತರ ಯಾವುದೇ ಕ್ರಮ ಜರುಗಿಸದೆ ಜಾಣ ಮೌನಕ್ಕೆ ಶರಣಾಗುತ್ತಾರೆ.
ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಈ ಸಮಸ್ಯೆಯನ್ನು ಗಂಭೀರವಾಗಿ ಚರ್ಚೆ ನಡೆಸಿ, ನಾಯಿಗಳ ಹಾವಳಿಗೆ ಬ್ರೇಕ್ ಹಾಕಬೇಕು ಎಂದು ಸಾರ್ವಜನಿಕರು ದೂರಿದ್ದಾರೆ.