

ಮಂಗಳೂರು, ಡಿಸೆಂಬರ್ 08: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ತಾಯಿ ಮತ್ತು ಮೂವರು ಮಕ್ಕಳು ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಮಂಜನಾಡಿಯ ಖಂಡಿಕದಲ್ಲಿ ನಡೆದಿದೆ. ಗಾಯಾಳುಗಳನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಖಂಡಿಕ ಪ್ರದೇಶದ ಮುತ್ತಲಿಬ್ ಎಂಬುವರ ಮನೆಯಲ್ಲಿ ಮಧ್ಯರಾತ್ರಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಮೇಲ್ಚಾವಣಿ ಹಾರಿಹೋಗಿದೆ.
ತಾಯಿ ಮತ್ತು ಮೂವರು ಮಕ್ಕಳು ಮಲಗಿದ್ದ ಮಂಚ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ಯಾಸ್ ಸ್ಫೋಟಕ್ಕೆ ಪ್ರಮುಖ ಕಾರಣ ಎಂದರೆ ಗ್ಯಾಸ್ ಲೀಕೇಜ್. ಕೇವಲ 14 ಕೆಜಿ ಸಿಲಿಂಡರ್ನಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಲೀಕ್ ಆಗುವ ಗ್ಯಾಸ್ ಮಾಡುವ ಹಾನಿ ಅಪಾರ ಪ್ರಮಾಣದಲ್ಲಿರುತ್ತದೆ. ಕೇವಲ ಮನೆಯವರ ಪ್ರಾಣ ತೆಗೆಯುವುದು ಮಾತ್ರವಲ್ಲದೆ ಮನೆಯ ಗೋಡೆ, ಚಾವಣಿ ಎಲ್ಲವೂ ಸಹ ಗ್ಯಾಸ್ ಸಿಲಿಂಡರ್ ಸ್ಫೋಟದ ರಭಸಕ್ಕೆ ಹಾರಿ ಹೋಗುವ ಸಾಧ್ಯತೆ ಇರುತ್ತದೆ.