ಬೆಳಗಾವಿ, ಡಿಸೆಂಬರ್ 9: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗುತ್ತಿದೆ. ಬಾಣಂತಿಯರ ಸಾವು, ಶಿಶುಗಳ ಸಾವು, ವಕ್ಫ್ ವಿವಾದ, ಮುಡಾ ಅಕ್ರಮ, ವಾಲ್ಮೀಕಿ ನಿಗಮ ಹಗರಣ, ಅಬಕಾರಿ ಇಲಾಖೆ ಭ್ರಷ್ಟಾಚಾರ, ಹೀಗೆ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾಲು ಸಾಲು ಬಾಣಗಳು ಬಿಜೆಪಿಯ ಬತ್ತಳಿಕೆಯಲ್ಲಿವೆ. ಆದರೆ, ಬಿಜೆಪಿಗೆ ಬಿಸಿ ತುಪ್ಪವಾಗಿರುವ ಯತ್ನಾಳ್, ಸದನದಲ್ಲಿ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಕಮಲ ಪಡೆಗೆ ಆತಂಕ ತಂದೊಡ್ಡಿದೆ. ಹೀಗಾಗಿ ಕಣಕ್ಕಿಳಿದಿರುವ ವಿಪಕ್ಷ ನಾಯಕ ಆರ್.ಅಶೋಕ್, ಯತ್ನಾಳ್‌ರನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಸದನದಲ್ಲಿ ಯುದ್ಧಕ್ಕಿಳಿದು ಸರ್ಕಾರಕ್ಕೆ ಖೆಡ್ಡಾ ತೋಡಲು ಸಜ್ಜಾಗಿದ್ದಾರೆ.ರೈತರ ಜಮೀನಿನಲ್ಲಿ ವಕ್ಫ್ ಹೆಸರು ಉಲ್ಲೇಖ ವಿಚಾರ ಬಿಜೆಪಿ ನಾಯಕರಿಗೆ ಮತ್ತೊಂದು ಪ್ರಮುಖ ಅಸ್ತ್ರವಾಗಿದೆ. ಇದೇ ವಿಚಾರಕ್ಕೆ ಬಿಜೆಪಿ ನಾಯಕರು ಪ್ರತಿಭಟಿಸಿದ್ದಾರೆ. ಯತ್ನಾಳ್ ಬಣ, ವಿಜಯೇಂದ್ರ ಟೀಂ, ಆರ್.ಅಶೋಕ್ ಸೇರಿ ಬಿಜೆಪಿ ನಾಯಕರು ರೈತರ ಬಳಿ ವಕ್ಫ್ ವಿಚಾರವಾಗಿ ಮಾಹಿತಿ ಸಂಗ್ರಹಿಸಿದ್ದು, ಇದನ್ನ ಸದನದ ಮುಂದಿಡಲಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ಪ್ರತ್ಯಸ್ತ್ರ ಸಿದ್ಧಪಡಿಸಿಕೊಂಡಿದ್ದು, ಬಿಜೆಪಿ ಅವಧಿಯಲ್ಲಿಯೇ ರೈತರಿಗೆ ಹೆಚ್ಚು ನೋಟಿಸ್ ನೀಡಲಾಗಿದೆ. ನಿಮ್ಮ ಅವಧಿಯಲ್ಲಿ ನೋಟಿಸ್ ನೀಡಿದಾಗ ಎಲ್ಲಿ ಹೋಗಿದ್ದಿರಿ ಎಂದು ತಿರುಗೇಟು ಕೊಡಲಿದ್ದಾರೆ. ಅಲ್ಲದೇ, ಯಾರ ಅವಧಿಯಲ್ಲಿ ಎಷ್ಟು ರೈತರಿಗೆ ನೋಟಿಸ್ ಎಂಬುದರ ಕುರಿತ ಅಂಕಿ ಅಂಶಗಳನ್ನು ಕೂಡ ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.ಒಟ್ಟಿನಲ್ಲಿ ಜನ ಪ್ರತಿನಿಧಿಗಳ ಮಾತಿನ ಯುದ್ಧಕ್ಕೆ ಬೆಳಗಾವಿಯ ಸುವರ್ಣ ಸೌಧ ಸಾಕ್ಷಿಯಾಗಲಿದೆ