
ತಿರುವನಂತಪುರಂ: ತೂಕ ಹೆಚ್ಚಾಗೋ ಭಯದಲ್ಲಿದ್ದ ಕಳೆದ 5-6 ತಿಂಗಳಿನಿಂದ ಊಟ ಮಾಡದೇ ಕೇವಲ ನೀರು ಕುಡಿದು ಡಯಟ್ ಮಾಡುತ್ತಿದ್ದ ಯುವತಿ ಸಾವಿಗೀಡಾಗಿರುವ ಘಟನೆ ಕೇರಳದ ಕಣ್ಣೂರಿನ ಕೂತುಪರಂಬ ಎಂಬಲ್ಲಿ ನಡೆದಿದೆ.
ಮೃತ ಯುವತಿಯನ್ನು ಶ್ರೀನಂದ (18) ಎಂದು ಗುರುತಿಸಲಾಗಿದೆ. ಆಕೆ ತೂಕ ಹೆಚ್ಚಾಗುವ ಭಯದಿಂದ ಆಹಾರ ತ್ಯೆಜಿಸುವ ಗೀಳಾದ ʻಅನೋರೆಕ್ಸಿಯಾʼ ಎಂಬ ಅಸ್ವಸ್ಥತೆಯಿಂದ ಬಳಲುತ್ತಿದ್ದಳು. ಈ ಖಾಯಿಲೆಯಿಂದ ಬಳಲುತ್ತಿರುವ ಜನ ತೆಳ್ಳಗಿನ ದೇಹವನ್ನು ಹೊಂದಿದ್ದರೂ ಸಹ ಅಧಿಕ ತೂಕ ಹೊಂದಿದ್ದೇವೆ ಎಂದು ಭಾವಿಸುತ್ತಾರೆ. ಇದರಿಂದ ಆಹಾರ ಸೇವಿಸುವುದನ್ನು ಬಿಡುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಶ್ರೀನಂದ ಸುಮಾರು 5 ರಿಂದ 6 ತಿಂಗಳುಗಳಿಂದ ಈ ಸ್ಥಿತಿಯಿಂದ ಬಳಲುತ್ತಿದ್ದಳು. ಕೆಲವು ತಿಂಗಳುಗಳಿಂದ ಏನನ್ನೂ ತಿನ್ನುತ್ತಿರಲಿಲ್ಲ. ಈ ವಿಚಾರವನ್ನು ಅವರ ಕುಟುಂಬ ಸದಸ್ಯರಿಂದ ಆಕೆ ಮುಚ್ಚಿಟ್ಟಿದ್ದಳು. ಸುಮಾರು ಐದು ತಿಂಗಳ ಹಿಂದೆ, ಯುವತಿಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ವೈದ್ಯರು ಆಕೆಗೆ ಊಟ ಮಾಡಬೇಕು ಎಂದು ಸಲಹೆ ಕೊಟ್ಟಿದ್ದರು. ಅಲ್ಲದೇ ಮನೋವೈದ್ಯರ ಸಲಹೆ ಪಡೆಯುವಂತೆ ಸೂಚಿಸಿದ್ದರು. ಇನ್ನೂ ಹಲವು ದಿನಗಳಿಂದ ಯುವತಿ ಕೇವಲ ಬಿಸಿ ನೀರನ್ನು ಮಾತ್ರ ಕುಡಿಯುತ್ತಿದ್ದಳು ಎಂದು ಸಂಬಂಧಿಕರು ತಿಳಿಸಿದ್ದಾರೆ.