ಬಂಟ್ವಾಳ: ತಮ್ಮ ವೃತ್ತಿ ಜೀವನದಲ್ಲಿ ಸಾವಿರಾರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಹಗಲು ಇರುಳು ಶ್ರಮಿಸುವ ಶಿಕ್ಷಕ ವೃತ್ತಿ ಪವಿತ್ರವಾಗಿದ್ದು, ದೇಶ ಕಟ್ಟುವಲ್ಲಿ ಮತ್ತು ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಟುಡೇ ಫೌಂಡೇಶನ್ ಫರಂಗಿಪೇಟೆ ಇದರ ಅಧ್ಯಕ್ಷ ಉಮರ್ ಫಾರೂಕ್ ಫರಂಗಿಪೇಟೆ ಹೇಳಿದರು. ದ.ಕ.ಜಿ.ಪಂ.ಮಾ.ಹಿ.ಪ್ರಾ. ಶಾಲೆ ಪುದು ಮಾಪ್ಲ ಇಲ್ಲಿಂದ ವರ್ಗಾವಣೆಗೊಂಡ ಶಿಕ್ಷಕಿ ಸುನೀತಾ ಲವೀನಾ ಡೇಸಾ ಅವರಿಗೆ ಟುಡೇ ಫೌಂಡೇಶನ್ ಫರಂಗಿಪೇಟೆ ಮತ್ತು ಶಾಲೆಯ ಶಿಕ್ಷಕರ ವತಿಯಿಂದ ನಡೆದ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಸರಕಾರದ ನಿಯಮದ ಪ್ರಕಾರ ವರ್ಗಾವಣೆಯಾದಾಗ ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ತೆರಳಬೇಕಾದದ್ದು ಅನಿವಾರ್ಯವಾದ ಪ್ರಕೃಯೆಯಾಗಿದೆ. ನಮ್ಮ ಶಾಲೆಯಲ್ಲಿ ಎಂಟು ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಸುನೀತಾ ಲವೀನಾ ಡೇಸಾ ಶಿಕ್ಷಕಿ ಬೇರೆ ಶಾಲೆಗೆ ವರ್ಗಾವಣೆಗೊಂಡಿದ್ದಾರೆ. ಬೋಧನೆ, ತಾಳ್ಮೆ ಮತ್ತು ಮಕ್ಕಳ ಜೊತೆ ಬೆರಿವಿಕೆಗೆ ವಿದ್ಯಾರ್ಥಿಗಳು, ಪೋಷಕರು, ಊರವರ ಪ್ರೀತಿಗೆ ಪಾತ್ರರಾದ ಅವರ ವರ್ಗಾವಣೆ ನಮ್ಮ ಶಾಲೆಗೆ ತುಂಬಲಾಗದ ನಷ್ಟವಾಗಿದೆ ಎಂದರು. ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ ಬಂದಾಗ ಮಕ್ಕಳ ಸಂಖ್ಯೆ ಹೆಚ್ಚಿಸಲು ಸುನೀತಾ ಲವೀನಾ ಡೇಸಾ ಅವರು ಇಲ್ಲಿನ ಇತರ ಶಿಕ್ಷಕಿಯರ ಜೊತೆ ಸೇರಿ ಮಾಡಿದ ಪ್ರಯತ್ನ ನಾವು ಮರೆಯಲು ಸಾಧ್ಯ ಇಲ್ಲ. ಎಲ್ಲಾ ಶಿಕ್ಷಕರ ಪ್ರಯತ್ನದಿಂದ ಇಂದು ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಿ ಪುದು ಮಾಪ್ಲ ಶಾಲೆ ಮಾದರಿಯಾಗಿದೆ ಎಂದರು. ಶಿಕ್ಷಕಿ ಸುನಿತಾ ಲವೀನಾ ಡೇಸಾ ಮಾತನಾಡಿ, ನನಗೆ ನೀವೆಲ್ಲಾ ಸೇರಿ ಮಾಡಿದ ಬೀಳ್ಕೊಡುಗೆ, ಗೌರವಕ್ಕೆ ನಾನು ಋಣಿಯಾಗಿದ್ದೇನೆ. ಇಲ್ಲಿ ನನ್ನ ಸೇವಾ ಅವಧಿಯಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ನನ್ನ ವೃತ್ತಿಯಲ್ಲಿ ನನಗೆ ಆತ್ಮತೃಪ್ತಿ ಇದೆ. ಮಕ್ಕಳು ಉತ್ತಮ ಮಟ್ಟಕ್ಕೆ ತಲುಪಲಿ ಎಂಬುದೇ ನನ್ನ ಗುರಿಯಾಗಿತ್ತು ಎಂದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ರಮ್ಲಾನ್, ಉಪಾಧ್ಯಕ್ಷೆ ರುಕ್ಸಾನಾ, ಸದಸ್ಯರಾದ ಹರ್ಷಾದ್, ಸಂಶಾದ್, ಟುಡೇ ಫೌಂಡೇಶನ್ ಸದಸ್ಯ ಅಬ್ದುಲ್ ಮಜೀದ್, ಮಾಜಿ ಮುಖ್ಯ ಶಿಕ್ಷಕಿ ಶಕುಂತಲಾ ಎಸ್. ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು. ಸಹ ಶಿಕ್ಷಕಿ ಮಮತಾ ಕೆ. ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ಅರ್ಪಿತಾ, ವಿದ್ಯಾರ್ಥಿ ಮುಹಮ್ಮದ್ ಸಲ್ವಾನ್ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಶಾಲಾ ಮುಖ್ಯ ಶಿಕ್ಷಕಿ ಯಮುನಾ ಸ್ವಾಗತಿಸಿದರು. ಶಿಕ್ಷಕಿ ಐವಿ ಸಿಲ್ವಿಯಾ ಸ್ವಿಕ್ವೇರಾ ಧನ್ಯವಾದಗೈದರು. ಶಿಕ್ಷಕಿ ಶಾಲೆಟ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.