ನಾಗರಿಕರಿಂದ ಅಭಿನಂದನೆ
ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಫರಂಗಿಪೇಟೆ ಮಸೀದಿ ಬಳಿ ರಸ್ತೆಗೆ ಬಾಗಿ ಅಪಾಯವನ್ನು ಆಹ್ವಾನಿಸುವಂತಿದ್ದ ಬೃಹತ್ ಮರದ ರೆಂಬೆಗಳನ್ನು ತೆರವು ಮಾಡಲಾಗಿದೆ.
ಪುದು ಗ್ರಾಮ ಪಂಚಾಯತ್, ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಪಾಯಕಾರಿ ಮರದ ರೆಂಬೆಗಳನ್ನು ತೆರವುಗೊಳಿಸಿದ್ದಾರೆ.
ಈ ಮಾರ್ಗದಲ್ಲಿ ನಿತ್ಯ ಶಾಲಾ ವಾಹನಗಳು, ವಿದ್ಯಾರ್ಥಿಗಳು, ಬಸ್, ಮತ್ತಿತರೆ ವಾಹನಗಳು ಎಡಬಿಡದೆ ಸಂಚರಿಸುತ್ತವೆ.
ಯಾವಾಗ ಯಾವ ವಾಹನದ ಮೇಲೆ ಮರ ಬಿದ್ದು ಅನಾಹುತ ಕಾದಿದೆಯೋ ಎಂಬ ಆತಂಕದಲ್ಲಿ ಸಾರ್ವಜನಿಕರು ಜೀವ ಬಿಗಿ ಹಿಡಿದು ಸಂಚರಿಸಬೇಕಾಗಿತ್ತು.
ಇದನ್ನು ಮನಗಂಡ ಮಾಜಿ ದ.ಕ ಜಿಲ್ಲಾ ಪಂಚಾಯತ್ ಸದಸ್ಯ ಉಮರ್ ಫಾರೂಕ್, ಪುದು ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರಮ್ಲಾನ್ ಮಾರಿಪಳ್ಳ, ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಇಕ್ಬಾಲ್ ಸುಜೀರ್,ಅಧ್ಯೆಕ್ಷೆ ರಶೀದಾ ಬಾನು ಅವರು ಪುದು ಗ್ರಾಮ ಪಂಚಾಯತ್ ಹಾಗೂ ಅರಣ್ಯ ಇಲಾಖೆ, ಮೆಸ್ಕಾಂಗೆ ಮನವಿ ಸಲ್ಲಿಸಿದ್ದರು.
ಈ ಮನವಿಗೆ ಸ್ಪಂದಿಸಿದ ಇಲಾಖೆ ಮರದ ರೆಂಬೆ ಕೊಂಬೆಗಳನ್ನು ಕತ್ತರಿಸಿ ವಿದ್ಯಾರ್ಥಿಗಳಿಗೆ, ವಾಹನ ಸವಾರರಿಗೆ, ನಾಗರಿಕರಿಗೆ ಅನುಕೂಲ ಮಾಡಿಕೊಟ್ಟಿದೆ.
ಅವರು ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಮೆಸ್ಕಾಂಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಅಲ್ಲದೆ, ಮರ ತೆರವಿಗೆ ಕಾರಣರಾದ ಅಲ್ಲಿನ ವಾರ್ಡ್ ಸದಸ್ಯರಾದ ಮೊಹಮ್ಮದ್ ಮೋನು ಹಾಗೂ ಇಶಾಮ್ ಫರಂಗಿಪೇಟೆ ಅವರಿಗೆ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.