April 17, 2025

ನವದೆಹಲಿ: ಭಾರತದಲ್ಲಿ ಉಪಗ್ರಹ ಆಧರಿತ ವೇಗದ ಇಂಟರ್‌ನೆಟ್‌ ಸೌಲಭ್ಯ ಒದಗಿಸಲು ಎಲಾನ್‌ ಮಸ್ಕ್‌ ಅವರ ಸ್ಪೇಸ್‌ಎಕ್ಸ್‌ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಏರ್‌ಟೆಲ್‌ ಮತ್ತು ಜಿಯೋ ತಿಳಿಸಿವೆ.

ಭಾರತಕ್ಕೆ ಸ್ಟಾರ್‌ಲಿಂಕ್ ಇಂಟರ್ನೆಟ್ ಸೇವೆಯನ್ನು ತರಲು ಸ್ಪೇಸ್‌ಎಕ್ಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಬಗ್ಗೆ ಏರ್‌ಟೆಲ್ ಘೋಷಣೆ ಮಾಡಿತ್ತು. ಅದರ ಬೆನ್ನಲ್ಲೇ, ಮುಖೇಶ್ ಅಂಬಾನಿಯವರ ಜಿಯೋ ಬುಧವಾರ ಎಲಾನ್ ಮಸ್ಕ್ ಅವರ ಕಂಪನಿಯೊಂದಿಗೆ ಇದೇ ರೀತಿಯ ಒಪ್ಪಂದವನ್ನು ಘೋಷಿಸಿದೆ.

ಈ ಒಪ್ಪಂದವು ಭಾರತದ ಅತ್ಯಂತ ಗ್ರಾಮೀಣ ಮತ್ತು ದೂರದ ಪ್ರದೇಶಗಳನ್ನು ಒಳಗೊಂಡಂತೆ ದೇಶಾದ್ಯಂತ ವಿಶ್ವಾಸಾರ್ಹ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ತಲುಪಿಸಲು ಸಹಾಯ ಮಾಡುತ್ತದೆ. ಜಿಯೋ ತನ್ನ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಸ್ಟಾರ್‌ಲಿಂಕ್ ಉಪಕರಣಗಳನ್ನು ನೀಡುವುದಲ್ಲದೆ, ಗ್ರಾಹಕ ಸೇವಾ ವಲಯದಲ್ಲಿ ಉತ್ತಮ ಕಾರ್ಯನಿರ್ವಹಿಸಲು ಸಹಕಾರಿಯಾಗಲಿದೆ ಎಂದು ಜಿಯೋ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಮಂಗಳವಾರ, ಭಾರತಿ ಏರ್‌ಟೆಲ್ ಕೂಡ ಸ್ಟಾರ್‌ಲಿಂಕ್ ಇಂಟರ್ನೆಟ್ ಅನ್ನು ಭಾರತಕ್ಕೆ ತರಲು ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಘೋಷಿಸಿತ್ತು. ಇದು ಭಾರತದಲ್ಲಿ ಸಹಿ ಮಾಡಲಾದ ಮೊದಲ ಒಪ್ಪಂದವಾಗಿದ್ದು, ದೇಶದಲ್ಲಿ ಸ್ಟಾರ್‌ಲಿಂಕ್ ಅನ್ನು ಮಾರಾಟ ಮಾಡಲು ಸ್ಪೇಸ್‌ಎಕ್ಸ್ ತನ್ನದೇ ಆದ ಅಧಿಕಾರವನ್ನು ಪಡೆದರೆ ಮಾತ್ರ ಇದು ಅನ್ವಯವಾಗುತ್ತದೆ.‌