

ಅಹಮದಾಬಾದ್, ಜೂನ್ 16: ಗುಜರಾತ್ನ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತ ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ. ಏರ್ಇಂಡಿಯಾ ವಿಮಾನದಲ್ಲಿದ್ದ ಎರಡು ಬ್ಲ್ಯಾಕ್ಸ್ಬಾಕ್ಸ್ಗಳ ಪೈಕಿ ಎರಡನೇ ಬ್ಲ್ಯಾಕ್ಬಾಕ್ಸ್ ಕೂಡ ಸಿಕ್ಕಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ವಿಮಾನದ ಫ್ಲೈಟ್ ಡೇಟಾ ರೆಕಾರ್ಡರ್ ಶುಕ್ರವಾರ ಪತ್ತೆಯಾಗಿತ್ತು. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಭಾನುವಾರ ಪತ್ತೆಯಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಹಿರಿಯ ಸಹಾಯಕ ಪಿ.ಕೆ. ಮಿಶ್ರಾ ಮಾಹಿತಿ ನೀಡಿದ್ದಾರೆ.
ಈ ಎರಡನೇ ಬ್ಲ್ಯಾಕ್ ಬಾಕ್ಸ್ನಿಂದ ಘಟನೆಯ ಪ್ರತಿ ಸೆಕೆಂಡ್‌ನಲ್ಲಿ ಏನಾಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಇದು ಕಾಕ್‌ಪಿಟ್ ಮತ್ತು ವಿಮಾನ ವ್ಯವಸ್ಥೆಯಲ್ಲಿ ಏನಾಯ್ತು ಎಂಬುದರ ಕುರಿತು ವಸ್ತುನಿಷ್ಠ ಮಾಹಿತಿಯನ್ನು ನೀಡುತ್ತದೆ. ಎಲ್ಲಾ ಕಾಕ್‌ಪಿಟ್ ಆಡಿಯೋ, ಪೈಲಟ್ ಸಂಭಾಷಣೆಗಳು, ರೇಡಿಯೋ ಪ್ರಸರಣಗಳು ಹಾಗೂ ಇತರೇ ಯಾಂತ್ರಿಕ ಶಬ್ಧಗಳ ಮಾಹಿತಿಯನ್ನು ಸಂಗ್ರಹಿಸಿರುತ್ತದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ. ವಿಶ್ವದ ಅತ್ಯಂತ ಸುರಕ್ಷಿತ ಪ್ರಯಾಣಿಕ ವಿಮಾನಗಳಲ್ಲಿ ಒಂದಾದ ಬೋಯಿಂಗ್ 787 ಡ್ರೀಮ್ಲೈನ್ರ್ ವಿಮಾನ ನೆಲಕ್ಕೆ ಅಪ್ಪಳಿಸಿತ್ತು.
ಅಹಮದಾಬಾದ್‌ನಲ್ಲಿ ನಡೆದ ಭೀಕರ ವಿಮಾನ ಅಪಘಾತದ 28 ಗಂಟೆಗಳ ಒಳಗೆ ಏರ್ ಇಂಡಿಯಾ ವಿಮಾನ AI-171 ರ ಮೊದಲ ಬ್ಲ್ಯಾಕ್ಬಾಕ್ಸ್ ವಶಪಡಿಸಿಕೊಳ್ಳಲಾಗಿದೆ. ಅಪಘಾತದ ಸಮಯದಲ್ಲಿ ವಿಮಾನ ಡಿಕ್ಕಿ ಹೊಡೆದ ಅಪಘಾತ ಸ್ಥಳದಲ್ಲಿರುವ ಕಟ್ಟಡದ ಛಾವಣಿಯಲ್ಲಿ ಈ ಬ್ಲ್ಯಾಕ್ಬಾಕ್ಸ್ ಸಿಕ್ಕಿತ್ತು.
ಇದು ವಿಮಾನದಲ್ಲಿದ್ದ 241 ಜನರು ಸೇರಿದಂತೆ 270 ಜನರ ಸಾವಿಗೆ ಕಾರಣವಾದ ಅಪಘಾತದ ಹಿಂದಿನ ಸಂಭವನೀಯ ಕಾರಣವನ್ನು ಗುರುತಿಸಲು ಸಹಾಯ ಮಾಡಲಿದೆ. ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತದ ಸ್ಥಳವನ್ನು ಪರಿಶೀಲಿಸಿದರು ಮತ್ತು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ನಾಗರಿಕ ಆಸ್ಪತ್ರೆಗೆ ಭೇಟಿ ನೀಡಿದರು. ವಿಮಾನದ ಎರಡೂ ಕಪ್ಪು ಪೆಟ್ಟಿಗೆಗಳು ಪತ್ತೆಯಾಗಿರುವುದರಿಂದ, ತನಿಖಾಧಿಕಾರಿಗಳಿಗೆ ಅಪಘಾತದ ಕಾರಣವನ್ನು ಕಂಡುಹಿಡಿಯುವುದು ಸುಲಭವಾಗುತ್ತದೆ.
ಲಂಡನ್‌ಗೆ ತೆರಳುತ್ತಿದ್ದ ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಮೇಘನಿನಗರ ಪ್ರದೇಶದ ವೈದ್ಯಕೀಯ ಕಾಲೇಜಿನ ಹತ್ತಿರದ ಕ್ಯಾಂಪಸ್‌ಗೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿತ್ತು. ಬೋಯಿಂಗ್ 787-8 (AI 171) ವಿಮಾನದಲ್ಲಿದ್ದ 242 ಪ್ರಯಾಣಿಕರು ಮತ್ತು ಸಿಬ್ಬಂದಿಗಳಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದಾರೆ. ಎಂಬಿಬಿಎಸ್ ವಿದ್ಯಾರ್ಥಿಗಳು ಸೇರಿ 29 ಮಂದಿ ಸಾವನ್ನಪ್ಪಿದ್ದಾರೆ.ಈ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ರಮೇಶ್ ವಿಶ್ವಾಸ್ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು.
ಬ್ಲ್ಯಾಕ್ಬಾಕ್ಸ್ ಎಂದರೇನು? ಫ್ಲೈಟ್ ಡೇಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಎಂದು ಕರೆಯಲ್ಪಡುವ ಕಪ್ಪು ಪೆಟ್ಟಿಗೆಯು ವಿಮಾನದ ಹಾರಾಟ ಮತ್ತು ಕಾಕ್‌ಪಿಟ್ ಸಂಭಾಷಣೆಗಳಿಗೆ ಸಂಬಂಧಿಸಿದ ಡೇಟಾವನ್ನು ದಾಖಲಿಸುತ್ತದೆ. ಅಪಘಾತದ ಕಾರಣಗಳನ್ನು ತನಿಖೆ ಮಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಕಪ್ಪು ಪೆಟ್ಟಿಗೆ ಎಂದು ಕರೆಯಲಾಗುತ್ತದೆ, ಆದರೆ ಇದು ಕಿತ್ತಳೆ ಬಣ್ಣದಲ್ಲಿರುತ್ತದೆ. ಈ ಬಣ್ಣವು ಅವಶೇಷಗಳಲ್ಲಿ ಸುಲಭವಾಗಿ ಗುರುತಿಸಲು ಸಹಾಯ ಮಾಡುತ್ತದೆ.