ಲಕ್ನೋ: ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 10 ಮಕ್ಕಳು ಸಜೀವ ದಹನ ಆಗಿರುವ ದಾರುಣ ಘಟನೆ ನಡೆದಿದೆ.
ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್‌ಐಸಿಯು) ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ತಲುಪುವ ಮೊದಲೇ ಹೊಗೆ ತುಂಬಿದ ವಾರ್ಡ್‌ನ ಕಿಟಕಿಗಳನ್ನು ಒಡೆದು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ರೋಗಿಗಳನ್ನು ಸ್ಥಳಾಂತರಿಸಿದ್ದಾರೆ.
ವಾರ್ಡ್‌ನಲ್ಲಿದ್ದ ಸಿಬ್ಬಂದಿ ಪ್ರಕಾರ, ರಾತ್ರಿ 10:35 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ 10 ಮಕ್ಕಳು ಸಾವನ್ನಪ್ಪಿದ್ದಾರೆ. ಮೂವತ್ತೇಳು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಮಕ್ಕಳ ವಾರ್ಡ್‌ನ ಎರಡು ಘಟಕಗಳ ಪೈಕಿ ಒಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಪ್ರಕರಣದ ತನಿಖೆಗೆ ಕ್ರಮವಹಿಸಲಾಗಿದೆ ಎಂದು ಝಾನ್ಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವಿನಾಶ್ ಕುಮಾರ್ ತಿಳಿಸಿದ್ದಾರೆ.
ಘಟನೆಯ ವೇಳೆ ಎನ್‌ಐಸಿಯುನಲ್ಲಿ ಒಟ್ಟು 54 ಮಕ್ಕಳನ್ನು ದಾಖಲಿಸಲಾಗಿದ್ದು, 44 ಮಕ್ಕಳನ್ನು ರಕ್ಷಿಸಲಾಗಿದೆ. ಬಲಿಯಾದವರ ಪೈಕಿ ಏಳು ಮಕ್ಕಳನ್ನು ಗುರುತಿಸಲಾಗಿದೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಬ್ರಜೇಶ್ ಪಾಠಕ್ ತಿಳಿಸಿದ್ದಾರೆ.