April 17, 2025

ದೆಹಲಿ: ಜ್ಞಾನೇಶ್ ಕುಮಾರ್ ಅವರನ್ನು 26ನೇ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರ ಅಧಿಕಾರಾವಧಿ ಫೆಬ್ರವರಿ 18ರಂದು ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಈ ನೇಮಕವನ್ನು ಘೋಷಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್, ಗೃಹ ಸಚಿವ ಅಮಿತ್ ಶಾ ಮತ್ತು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದ ಸಮಿತಿ ಈ ಆಯ್ಕೆ ಮಾಡಿದೆ.

ಕೇರಳ ಕೆಡರ್‌ನ 1988ರ ಬ್ಯಾಚ್‌ನ ಮಾಜಿ ಐಎಎಸ್ ಅಧಿಕಾರಿಯಾಗಿರುವ ಜ್ಞಾನೇಶ್ ಕುಮಾರ್, ಈ ಹಿಂದೆ ಸಂಸದೀಯ ವ್ಯವಹಾರಗಳ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು. ಅವರು ಅಮಿತ್ ಶಾ ಮೇಲ್ವಿಚಾರಣೆಯಲ್ಲಿರುವ ಸಹಕಾರ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಜ್ಞಾನೇಶ್ ಕುಮಾರ್ ಗೃಹ ವ್ಯವಹಾರಗಳ ಸಚಿವಾಲಯದಲ್ಲಿ ಸೇವೆ ಸಲ್ಲಿಸುವಾಗ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಥಾಪನೆ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2019ರಲ್ಲಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಿದ್ದ ಸಂವಿಧಾನದ 370 ವಿಧಿ ರದ್ದುಗೊಳಿಸಿದಾಗ, ಅವರು ಗೃಹ ಸಚಿವಾಲಯದ ಜಮ್ಮು ಮತ್ತು ಕಾಶ್ಮೀರ ವಿಭಾಗದ ಮುಖ್ಯಸ್ಥರಾಗಿದ್ದರು.

ಕಾಂಗ್ರೆಸ್​ ಆಕ್ಷೇಪ
ಹೊನ ಚುನಾವಣಾ ಆಯುಕ್ತರ ನೇಮಕವು ಕಾಂಗ್ರೆಸ್ ಪಕ್ಷದ ತೀವ್ರ ಆಕ್ಷೇಪದ ನಡುವೆಯೇ ನಡೆಸಲಾಗಿದೆ. ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಸೋಮವಾರ ನಡೆದ ಸಭೆ ಬಗ್ಗೆ ಕಾಂಗ್ರೆಸ್‌ನ ಅಸಮಾಧಾನ ವ್ಯಕ್ತಪಡಿಸಿದೆ.

ಕಾಂಗ್ರೆಸ್ ಪಕ್ಷವು ಈ ಕುರಿತು ಪ್ರತಿಕ್ರಿಯಿಸಿ, ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯ ರಚನೆ ಕುರಿತು ಸುಪ್ರೀಂ ಕೋರ್ಟ್ ಫೆಬ್ರವರಿ 19ರಂದು ತೀರ್ಪು ನೀಡಬೇಕಾಗಿದೆ. ಹೀಗಾಗಿ ಈ ಸಭೆ ನಡೆಸಬಾರದಿತ್ತು ಎಂದು ಅಭಿಪ್ರಾಯಪಟ್ಟಿದೆ.

“ಇಂದು ಮುಖ್ಯ ಚುನಾವಣಾ ಆಯುಕ್ತರ (CEC) ನೇಮಕಕ್ಕೆ ಸಂಬಂಧಿಸಿದ ಸಭೆ ನಡೆಯಿತು. ಸುಪ್ರೀಂ ಕೋರ್ಟ್ ಈ ವಿಷಯವನ್ನು ಫೆಬ್ರವರಿ 19ರಂದು ಕೇಳಿ ಸಮಿತಿಯ ರಚನೆ ಹೇಗಿರಬೇಕು ಎಂಬುದರ ಬಗ್ಗೆ ತೀರ್ಮಾನಿಸಬೇಕಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಈ ದಿನದ ಸಭೆಯನ್ನು ಮುಂದೂಡಬೇಕಾಗಿತ್ತು,” ಎಂದು ಕಾಂಗ್ರೆಸ್ ಪಕ್ಷ ತನ್ನ ಹೇಳಿಕೆ ಪ್ರಕಟಿಸಿದೆ,

ರಾಜ್ಯಸಭಾ ಸದಸ್ಯ ಅಭಿಷೇಕ್ ಮನು ಸಿಂಘ್ವಿ, “ಮುಖ್ಯ ನ್ಯಾಯಮೂರ್ತಿಯನ್ನು ನೇಮಕ ಪ್ರಕ್ರಿಯೆಯಿಂದ ಹೊರಗಿಡಲು ಪ್ರಯತ್ನಿಸುವ ಮೂಲಕ, ಸರ್ಕಾರ ಚುನಾವಣಾ ಆಯೋಗದ ಮೇಲೆ ಸಂಪೂರ್ಣ ಪಡೆಯಲು ಉದ್ದೇಶಿಸಿರುವುದು ಸ್ಪಷ್ಟವಾಗಿದೆ. ಆದರೆ, ಆಯೋಗಕ್ಕೆ ಅಗತ್ಯವಿರುವುದು ಕೇವಲ ನಿಯಂತ್ರಣವಲ್ಲ, ಅದು ನಂಬಿಕೆ ಮತ್ತು ವಿಶ್ವಾಸಾರ್ಹತೆ,” ಎಂದು ಟೀಕಿಸಿದ್ದಾರೆ.