ಬೆಳಗಾವಿ, ಡಿಸೆಂಬರ್ 17: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನ ಸೋಮವಾರ ವಿಶೇಷ ಸನ್ನಿವೇಶವೇಶಕ್ಕೆ ಸಾಕ್ಷಿಯಾಯಿತು. ಸುಮಾರು 15 ಗಂಟೆಗಳ ಕಾಲ, ಅಂದರೆ ಬೆಳಗ್ಗೆ 10 ಗಂಟೆಗೆ ಆರಂಭವಾಗಿ ರಾತ್ರಿ 12.55 ರ ವರೆಗೂ ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನಾ ಕಲಾಪ ನಡೆದಿದೆ. ಕಳೆದೊಂದು ದಶಕದಲ್ಲೇ ಇದು ವಿಶೇಷ ದಾಖಲೆಯ ಕಲಾಪವಾಗಿದೆ.
ವಿಶ್ವಕಪ್ ಅಂದುಕೊಂಡು ಸಹಕಾರ ಕೊಡಿ ಎಂದ ಸ್ಪೀಕರ್
ನಮಗೆ ಅವಕಾಶ ಕೊಡಿ, ಸಮಯವಾಯಿತು ಎಂದು ಕೆಲ ಶಾಸಕರು ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್, ವಿಶ್ವಕಪ್ ಕ್ರಿಕೆಟ್ ನೋಡುವಾಗ ರಾತ್ರಿ 3 ಗಂಟೆಯವರೆಗೆ ಕಾಯುವುದಿಲ್ಲವೇ? ಅದೇ ರೀತಿ ಈಗ ವಿಶ್ವಕಪ್ ಅಂದುಕೊಂಡು ಸಹಕಾರ ಕೊಡಿ ಎಂದರು. ಮಧ್ಯರಾತ್ರಿ ಆದರೂ ತಮ್ಮ ಗಮನ ಸೆಳೆಯುವ ಸೂಚನೆಗೆ ಸಚಿವರ ಉತ್ತರ ಪಡೆಯಲು ರಾಯಚೂರು ಜಿಲ್ಲೆಯ ದೇವದುರ್ಗ ಶಾಸಕಿ ಕರೆಮ್ಮ ನಾಯ್ಕ್ ಹಾಜರಿದ್ದರು.
ತಮ್ಮ ಸರದಿ ಬಂದಾಗ ಇಂಡಿ ಶಾಸಕ ಯಶವಂತರಾಯಗೌಡ, ಕರೆಮ್ಮ ಅವ್ರು ಬಹಳ ಹೊತ್ತಿನಿಂದ ಇದ್ದಾರೆ. ಅವರಿಗೆ ಉತ್ತರ ಕೊಟ್ಟು ಕಳುಹಿಸಿ ಎಂದು ಮನವಿ ಮಾಡಿದರು. ಬೆಳಗ್ಗೆ 10 ಗಂಟೆಗೆ ಕಲಾಪ ಮುಂದೂಡಿದ ವೇಳೆ, ಸದನದಲ್ಲಿ ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ ಮೂವರು ಸಚಿವರು, 7 ಕಾಂಗ್ರೆಸ್ ಶಾಸಕರು, 4 ಜೆಡಿಎಸ್ ಶಾಸಕರು, ಓರ್ವ ಬಿಜೆಪಿ ಶಾಸಕ ಮತ್ತು 1 ಪಕ್ಷೇತರ ಶಾಸಕ ಹಾಜರಿದ್ದರು.