ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಎಂಎಲ್‌ಸಿ ಸಿ.ಟಿ ರವಿ ಅಸಂವಿಧಾನಿಕ ಪದ ಬಳಕೆ ಆರೋಪದ ಬಗ್ಗೆ ಆಡಳಿತ ಮತ್ತು ವಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ಈ ನಡುವೆ ಸುವರ್ಣ ಸೌಧದಲ್ಲಿ ಭಾರೀ ಹೈಡ್ರಾಮಾ ನಡೆದಿದೆ.
ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ, ಕೆಲವರು ಹಲ್ಲೆಗೂ ಯತ್ನಿಸಿರುವ ದೃಶ್ಯಗಳು ಕಂಡುಬಂದಿವೆ.
ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ:
ಸಿ.ಟಿ ರವಿ ವಿರುದ್ಧ ಆರೋಪ ಕೇಳಿಬರುತ್ತಿದ್ದಂತೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದ್ರು. ನೂರಾರು ಬೆಂಬಲಿಗರು ಸುವರ್ಣಸೌಧದ ಎದುರು ಜಮಾಯಿಸಿದರು. ಸೌಧದ ಫಸ್ಟ್‌ಫ್ಲೋರ್ ಲಾಂಜ್ ಬಳಿ ನಿಂತು ಗಲಾಟೆ ಮಾಡಿದ್ರು. ಸಿ.ಟಿ ರವಿ ವಿರುದ್ಧ ಧಿಕ್ಕಾರ ಕೂಗಿದ್ದಲ್ಲದೇ ಏಯ್, ಆಚೆ ಬಾರೋ, ಧೈರ್ಯವಿದ್ದರೆ ಹೊರಗೆ ಬಾ ಎಂದು ಏಕವಚನದಲ್ಲೇ ಆವಾಜ್ ಹಾಕಿದ್ರು. ಈ ವೇಳೆ ಒಂದಿಬ್ಬರು ಹಲ್ಲೆಗೂ ಯತ್ನಿಸಿದ ಪ್ರಸಂಗ ನಡೆಯಿತು. ಇದರಿಂದ ಹೆಬ್ಬಾಳ್ಕರ್ ಬೆಂಬಲಿಗರ ವಿರುದ್ಧ ಕೆಂಡಾಮಂಡಲರಾದ ಸಿ.ಟಿ ರವಿ ʻಬಾ.. ಬಾ.. ಹೊಡಿ ಬಾ.., ಅದೇನ್ ಮಾಡ್ತಾರೆ ಮಾಡ್ಲಿ ಬಿಡ್ರಿ ಎಂದು ಪ್ರತಿ ಸವಾಲು ಹಾಕಿದರು.
ಅಲ್ಲದೇ ಘಟನೆ ಖಂಡಿಸಿ ಸಿ.ಟಿ ರವಿ, ಅಶ್ವಥ್ ನಾರಾಯಣ್ ಸ್ಥಳದಲ್ಲೇ ಧರಣಿ ಕುಳಿತರು. ಎಡಿಜಿಪಿ ಮನವೊಲಿಕೆ ಬಳಿಕ ಸಭಾಪತಿಗಳಿಗೆ ದೂರು ನೀಡಲು ಅಲ್ಲಿಂದ ತೆರಳಿದರು. ಬಳಿಕ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿದ್ದ ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದರು.