ಬಂಟ್ವಾಳ: ಕಳೆದ ಎರಡು ತಿಂಗಳಿಂದ ಗೌರವಧನವಿಲ್ಲದೆ ಅಂಗನವಾಡಿ ಕಾರ್ಯಕರ್ತರು ದಿಕ್ಕು ತೋಚದಾಗಿದ್ದಾರೆ. ಕುಟುಂಬ ನಿರ್ವಹಣೆಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಪದೇ ಪದೆ ಗೌರವಧನ ವಿಳಂಬವಾಗುತ್ತಿದ್ದು, ಈ ಹಿನ್ನೆಲೆ ಸೆಪ್ಟೆಂಬರ್ 1ರಿಂದ ಮಧ್ಯಾಹ್ನದವರೆಗೆ ಕೇಂದ್ರ ನಡೆಸಲು ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ (ರಿ.)ತೀರ್ಮಾನಿಸಿದೆ.
ಗೌರವಧನ ಬಗ್ಗೆ ಪ್ರತಿಭಾರಿ ಒಂದಲ್ಲಒಂದು ಕಾರಣ ನೀಡಲಾಗುತ್ತಿದೆ. ಆದರೆ, ಕೆಲಸ ಮಾತ್ರ ತಪ್ಪುವುದಿಲ್ಲ. ಅಂಗನವಾಡಿಯಿಂದ ಒದಗಿಸುವ ಸೇವೆಗಳು ಮಾತ್ರ ಹೆಚ್ಚುವರಿಗೆ ಸೇರ್ಪಡೆಯಾಗುತ್ತಲೇ ಇರುತ್ತವೆ. ಅದ್ದರಿಂದ ಬಂಟ್ವಾಳ ತಾಲೂಕಿನ ವಲಯ ಸಭೆಯಲ್ಲಿ ಇಲಾಖೆಗೆ ಬೇಕಾದ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ ಎಂದು ಸಂಘ ಹೇಳಿದೆ.
ಅಂಗನವಾಡಿ ಸಹಾಯಕಿಯರಿಗೆ ಜೂನ್ ತಿಂಗಳಿನಿಂದ ಗೌರವ ಧನ ಪಾವತಿಯಾಗಿಲ್ಲ. ಈ ರೀತಿ ಎರಡು ಮೂರು ತಿಂಗಳು ಗೌರವಧನ ದೊರೆಯದೇ ಇದ್ದರೆ ತಾವು ಜೀವನ ನಿರ್ವಹಿಸುವುದಾದರೂ ಹೇಗೆ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆಯರು.
ಸಕಾಲಕ್ಕೆ ಗೌರವಧನ ಸಿಗದ ಕಾರಣ ಬಡ ಮತ್ತು ಮಧ್ಯಮ ವರ್ಗದ ಕುಟುಂಬದವರಾಗಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿದೆ. ನಾನಾ ಕುಟುಂಬಗಳು ಇದನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿವೆ. ಕಳೆದ ಎರಡು ತಿಂಗಳಿಂದ ಗೌರವಧನ ನೀಡಿಲ್ಲ. ಕುಟುಂಬ ನಿರ್ವಹಣೆ, ಮಕ್ಕಳ ಶಾಲಾ ದಾಖಲಾತಿಗೆ ಸಮಸ್ಯೆಯಾಗುತ್ತಿದೆ. ಈ ವೇಳೆ ಗೌರಧನ ಸಿಕ್ಕರೆ ಬಹಳ ಅನುಕೂಲವಾಗುತ್ತದೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ಬಂಟ್ವಾಳ ತಾಲೂಕು ಅಧ್ಯಕ್ಷರು ವಿಜಯವಾಣಿ ಶೆಟ್ಟಿ ತಿಳಿಸಿದ್ದಾರೆ.