December 22, 2024
world-alzheimers-day-1-1200x1200

🖋️🖋️🖋️🖋️
ಅಬ್ದುಲ್ ಸಮದ್ ಸಾಲೆತ್ತೂರು
ಸೈಕಾಲಜಿಸ್ಟ್

ಎರಡು ತಿಂಗಳ ಹಿಂದಿನ ಮಾತು. ಅಂದು 65 ವರ್ಷದ ಆ ವೃದ್ಧ ನಮ್ಮ ಬ್ರೈನ್ ಹೆಲ್ತ್ ಕ್ಲೀನಿಕ್‌ಗೆ ಬಂದು “ನನಗೆ ನೆನಪಿನ ಶಕ್ತಿ ಕಡಿಮೆ ಇದೆ. ಇಲ್ಲಿ ಚಿಕಿತ್ಸೆ ಸಿಗುತ್ತಾ” ಎಂದು ಬಹಳ ಕುತೂಹಲದಿಂದ ಕೇಳಿದರು. ಕ್ಲಿನಿಕ್ ಮುಚ್ಚುವ ಸಮಯವಾಗಿದ್ದರೂ, ಅವರ ವಿನಮ್ರ ಭಾವ ನೋಡಿ ಸ್ವಲ್ಪ ಮಾತಾಡಿಸಿ ಬಿಡೋಣ, ಹಾಗೇನಾದರೂ ಸಮಸ್ಯೆ ಇದ್ದರೆ ಮತ್ತೆ ಬರಲು ಸೂಚಿಸಿದರಾಯಿತು ಎಂದುಕೊಂಡು ಕುಳಿತುಕೊಳ್ಳಲು ಹೇಳಿದೆ. ಮಾಹಿತಿ ಪಡೆಯುವ ಉದ್ಧೇಶದೊಂದಿಗೆ ಅವರೊಂದಿಗೆ ಮಾತಿಗೆ ಆರಂಭಿಸಿದೆ.

  ಆತ ಬಿಕಾಂ ಪದವೀಧರ. ಖಾಸಗಿ ಸಂಸ್ಥೆಯಲ್ಲಿ ವ್ಯವಸ್ಥಪಕನಾಗಿ ಹುದ್ದೆ ನಿರ್ವಹಿಸಿ ಸದ್ಯ ನಿವೃತ್ತ ಹೊಂದಿದ್ದರು.  ವಿದ್ಯಾರ್ಹತೆ, ಅವರಿಗೆ ತಿಳಿದಿರುವ ಭಾಷೆಗಳು, ಕುಟುಂಬ, ವೃತ್ತಿ ಇತ್ಯಾದಿ ಪ್ರಾಥಮಿಕ ಪ್ರಶ್ನೆಗಳನ್ನು ಮೇಲಿಂದ ಮೇಲೆ ಕೇಳಿ ನೋಡಿದಾಗ ಅವರಿಗೆ ಅಷ್ಟೇನೂ ಸಮಸ್ಯೆ ಕಾಣಲಿಲ್ಲ . ಆದರೂ ಸ್ಪಷ್ಟವಾಗಿ ತಿಳಿಯಬೇಕಾದರೆ ಪರೀಕ್ಷೆಯ ಅನಿವಾರ್ಯವಿತ್ತು. ಪರೀಕ್ಷೆಗಾಗಿ ಪ್ರಶ್ನಾವಳಿಯ ಪ್ರತಿಯೊಂದನ್ನು ಮೇಜಿನ ಮೇಲಿಟ್ಟು ಆರಂಭಿಸೋಣವೇ ಎಂದು ಕೇಳಿದ ತಕ್ಷಣವೇ ಆಯ್ತ ಎಂಬಂತೆ ತಲೆಯಾಡಿಸಿ ಒಪ್ಪಿಗೆ ನೀಡಿದರು. ಪ್ರಶ್ನಾವಳಿಯಲ್ಲಿದ್ದ ಕೆಲವು ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಕುಹಕ‌ ನಗುವಿನೊಂದಿಗೆ ಉತ್ತರಿಸುತ್ತಾ "ನೀವು ನನಗೆ ಜನರ್ ನೋಲೆಜ್ ಪ್ರಶ್ನೆ ಕೇಳುತ್ತಿದ್ದೀರಾ" ಎಂದರು. ಇಂತಹ ಸಂಶಯ ಹಲವು ರೋಗಿಗಳಿಂದ ಕೇಳಿದ ಅನುಭವ ನನ್ನದು. ಇಲ್ಲ ಇನ್ನೂ ಹಲವು ರೀತಿಯ ಪರೀಕ್ಷೆಗಳಿವೆ ಎಂದೆ. ಹಾಗೇ ಪ್ರಶ್ನೆಗಳೆಲ್ಲಾ ಕೇಳಿದ ನಂತರ ಅವರಿಗೆ ಅಲ್ಪ ಪ್ರಮಾಣದ ಮರೆವಿನ ಸಮಸ್ಯೆ ಇರುವುದು ಖಚಿತವಾಯಿತು..

ಅರುವತ್ತಕ್ಕೆ ಅರಳು-ಮರುಳು ಎಂಬ ನುಡಿಗಟ್ಟಿನಂತೆ ಡಿಮೆನ್ಶಿಯಾ ಅಥವಾ ಮರೆವಿನ ಕಾಯಿಲೆಯ ಆರಂಭಿಕ ಹಂತ ಅವರನ್ನು ಸ್ಪರ್ಷಿಸಿತ್ತು.
ಈಗ, ಆ ವ್ಯಕ್ತಿಗೆ ಅವರ ಸದ್ಯದ ಸ್ಥಿತಿ ತಿಳಿಸಿ ಪರಿಹಾರೋಪಾಯಗಳ ಬಗ್ಗೆ ಮಾಹಿತಿ ನೀಡುವುದು ನನ್ನ ಜವಬ್ದಾರಿ ಎಂಬಂತೆ ಮಾತು ಮುಂದುವರಿಸುತ್ತಾ ಹೋಗಿ ಅವರಲ್ಲಿರುವ ಮರೆವಿನ ಕಾಯಿಲೆ ಕುರಿತು ಸಮಾಧಾನದಿಂದ ವಿವರಿಸಿದೆ.
ನಂತರ ಅವರೇ ಸಮಸ್ಯೆ ಗೆ ಸ್ವತಃ ಪರಿಹಾರ ಕಂಡುಕೊಳ್ಳುವಂತೆ ಪ್ರರೇಪಿಸಿದೆ.
ಡಿಮೆನ್ಶಿಯಾ ಇರುವ ವ್ಯಕ್ತಿಗಳಲ್ಲಿ,
ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ಮರೆಯುವುದು,ಇಟ್ಟ ವಸ್ತು ಎಲ್ಲಿಟ್ಟಿದ್ದೆನೆಂದು ಗೊತ್ತಿಲ್ಲದಿರುವುದು,ಇತ್ತೀಚಿನ ಘಟನೆ ತಾವು ಮಾಡಿದ ಕೆಲಸ,ಇರುವ ಸ್ಥಳ,ದಿನಾಂಕ ,ಸಮಯ,ದಾರಿ ಇತ್ಯಾದಿಗಳನ್ನು ಮರೆಯುವುದು ,ಏಕಾಗ್ರತೆ ಕಡಿಮೆಯಾಗುವುದು,ಭಾಷೆಯಲ್ಲಿ ಏರುಪೇರು,ದೃಷ್ಟಿ-ಸ್ಥಳ ಗಳನ್ನು ಅಂದಾಜು ಮಾಡುವ ಕೌಶಲ್ಯಗಳು(visuospatial skill) ಕುಂಠಿತಗೊಳ್ಳುವುದು ಇದರ ಪ್ರಮುಖ ಲಕ್ಷಣಗಳಾದರೆ, ವಿವಿಧ ರೀತಿ ಮಾನಸಿಕ ಏರುಪೇರು ವ್ಯಕ್ತಿಯನ್ನು ಕಾಡಬಹುದು,ಹತಾಶೆ,ಹಠ,ಸಿಟ್ಟು,ಮಂಕಾಗಿ ಕುಳಿತುಬಿಡುವುದು,ಅನುಮಾನ,ಖಿನ್ನತೆ, ಭ್ರಮೆ ಹೀಗೆ ಹಲವಾರು ಮಾನಸಿಕ ಸಮಸ್ಯೆಗಳು ರೋಗಿಯಲ್ಲಿ ಕಂಡುಬರುತ್ತದೆ ಇವು ಕುಟುಂಬದವರಿಗೆ ದೊಡ್ಡ ಸವಾಲಾಗಿ ಪರಿಣಮಿಸಬಹುದು.
ಈ ಹಂತದಲ್ಲಿ ವ್ಯಕ್ತಿಗೆ ಸಾಮಾಜಿಕ ಜೀವನ,ದೈಹಿಕ ವ್ಯಾಯಾಮ,ವ್ಯಸನ ಮುಕ್ತ ಜೀವನ ಮತ್ತು ಆಹಾರ ಕ್ರಮ ಹಾಗೂ ಮೆದುಳನ್ನು ಚುರುಕುಗೊಳಿಸುವ ಚಟುವಟಿಕೆಗಳನ್ನು ಮಾಡುವುದು ಎಲ್ಲವೂ ಇದನ್ನು ನಿಯಂತ್ರಣದಲ್ಲಿಡಲು ಸಹಕಾರಿ.‌ಮಾತು ಮುಂದುವರಿಸಿದ ರೋಗಿ ತಾನು ಏನೆಲ್ಲಾ ಮಾಡಬಹುದೆಂದು ಯೋಜನೆ ರೂಪಿಸಿದರು, ದಿನಾಲು ಪಾರ್ಕಿಗೆ ವಾಕಿಂಗ್ ಹೋಗುದು,ಲೈಬ್ರರಿಗೆ ಹೋಗಿ ಪುಸ್ತಕ ಓದುವುದು ಹೀಗೆ ಹಲವು..
ರೋಗಿಯಲ್ಲಿ ಮೊದಲಿಗೆ ಇದ್ದ ಆತಂಕ ಕಡಿಮೆಯಾಗಿತ್ತು,ಪರಿಹಾರ ತನ್ನಲ್ಲಿಯೇ ಇದೆ ಎಂದು ತಿಳಿದು ಸಂತಸ ದಲ್ಲಿ ” ನೆಕ್ಸ್ಟ್ ಟೈಮ್ ಬಂದರೆ ಇಲ್ಲಿಗೆ ಬರಬಹುದೇ”ಎಂದು ಕೇಳಿದರು. ಖಂಡಿತಾ ಬನ್ನಿ ಎಂದೇ, ಎ‌ನೋ ಒಂದು ತೃಪ್ತಿ ಜೀವನದ ಮುಸ್ಸಂಜೆಯಲ್ಲಿ ಒಂದಿಷ್ಟು ಆಶಾಭಾವದ ಚಿಲುಮೆ ಸೃಷ್ಟಿಸಿದ ಖುಷಿ‌ ನನ್ನದು.
ಮುಪ್ಪುಕಾಯಿಲೆ’ ನಮಗೆ ಬಂದೇ ಬಿಟ್ಟರೆ?’ಎಂದು ಹೆದರುವ ಅವಶ್ಯಕತೆಯಿಲ್ಲ. ಆರೋಗ್ಯಕರ ಜೀವನಶೈಲಿ, ಮುಪ್ಪು ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿ ಗುರುತಿಸುವುದು, ತತ್‌ಕ್ಷಣ ಚಿಕಿತ್ಸೆ ಪಡೆಯುವ ಸೌಲಭ್ಯ ಇವೆಲ್ಲದರ ಬಗೆಗೆ ಮಾಹಿತಿ ಇಂದು ನಮಗಿದೆ. ಹಾಗೆಂದ ಮೇಲೆ ಡಿಮೆನ್ಸಿಯಾ ತಡೆಯುವ -ಎದುರಿಸುವ ಪ್ರಯತ್ನದಲ್ಲಿ ನಾವು ಖಂಡಿತ ಜಯಶಾಲಿಗಳಾಗಬಹುದು
“ಮರೆವಿನ ಕಾಯಿಲೆ ಅಲ್ಜೈಮರ್ಸ್ ರೋಗಗಳನ್ನು ನಿರ್ವಹಿಸಲು ಇದು ಸಕಾಲ”

Leave a Reply

Your email address will not be published. Required fields are marked *