ಬಂಟ್ವಾಳ: ಬರೋಬ್ಬರಿ 55 ವರ್ಷಗಳ ಕಾಲ ಯಕ್ಷಗಾನ ರಂಗದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ ಹಿರಿಯ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಅವರು ಇಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಯಾವುದೇ ಅತಿರೇಕಗಳಿಲ್ಲದೇ, ಪಾರಂಪರಿಕ ಶೈಲಿಯನ್ನು ಶುದ್ಧ ಹಾಸ್ಯವನ್ನು ಮಾಡುವ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಬಂಟ್ವಾಳ ಜಯರಾಮ ಆಚಾರ್ಯ ಅವರು ಯಾವುದೇ ಪಾತ್ರವನ್ನು ನೀಡಿದರೂ ಅದಕ್ಕೆ ನ್ಯಾಯ ಒದಗಿಸುತ್ತಿದ್ದರು. 67 ವರ್ಷ ವಯಸ್ಸಿನ ಬಂಟ್ವಾಳ ಜಯರಾಮ ಆಚಾರ್ಯ ಅವರು ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ.
ಬೆಂಗಳೂರಿನಲ್ಲಿ ನಡೆಯಲಿದ್ದ ಯಕ್ಷಗಾನ ಕಾರ್ಯಕ್ರಮವೊಂದರಲ್ಲಿ ಪಾತ್ರ ಮಾಡಲು ಆಗಮಿಸಿದ್ದ ಬಂಟ್ವಾಳ ಜಯರಾಮ ಆಚಾರ್ಯ ಅವರಿಗೆ ಇಂದು ಮುಂಜಾನೆ ನಾಲ್ಕು ಗಂಟೆಗೆ ಹೃದಯಸ್ತಂಭನವಾಗಿತ್ತು. ಕೂಡಲೇ ಅವರ ಜೊತೆಗಿದ್ದ ಸಹ ಕಲಾವಿದರು ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ.