ವಯನಾಡು, ಕೇರಳ: ಕೇರಳದ ವಯನಾಡು ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅಧಿಕೃತವಾಗಿ ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ರಾಹುಲ್ ಗಾಂಧಿ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರೆ ಸ್ಥಳೀಯ ಕಾಂಗ್ರೆಸ್ ನಾಯಕರು ಈ ವೇಳೆ ಜೊತೆಯಾದರು.
ಮಂಗಳವಾರ ಸಂಜೆಯೇ ಪ್ರಿಯಾಂಕಾ ವಯನಾಡಿಗೆ ಆಗಮಿಸಿದ್ದರು. ತಮ್ಮ ಸಹೋದರ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆಯಾಗಿರುವ, ಅವರ ತಾಯಿ ಸೋನಿಯಾ ಜೊತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರು ನಾಮಪತ್ರ ಸಲ್ಲಿಸಿದರು.
ಪ್ರಿಯಾಂಕಾ ರೋಡ್ ಶೋಗೆ ಜನಸಾಗರ: ಇದೆ ವೇಳೆ ಕಲ್ಪೆಟ್ಟಾದ ಹೊಸ ಬಸ್ ನಿಲ್ದಾಣದಿಂದ ಸಾಗಿದ ಈ ಬೃಹತ್ ರೋಡ್ ಶೋ ವಾಹನದಲ್ಲಿ ಪ್ರಿಯಾಂಕಾ ಜೊತೆಗೆ ಅವರ ಪತಿ ರಾಬರ್ಟ್ ವಾದ್ರಾ ಮತ್ತು ಅವರ ಮಗ ಕೂಡ ಜೊತೆಯಾದರು. 25 ಕಿ.ಮೀ ಸಾಗಿದ ರೋಡ್ ಶೋದ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರ ಕಂಡು ಬಂತು. ಯುಡಿಎಫ್ ಕಾರ್ಯಕರ್ತರಯ, ಬೆಂಬಲಿಗರು ಮಾರ್ಗದ ಉದ್ದಕ್ಕೂ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಪರವಾಗಿ ಘೋಷಣೆಗಳನ್ನು ಕೂಗಿದರು.
ಪ್ರಿಯಾಂಕಾ ಕೂಡ ದಾರಿ ಉದ್ದಕ್ಕೂ ನಗುಮೊಗದಿಂದ ಜನರಿಗೆ ಕೈ ಬೀಸಿದರು. ರೋಡ್ ಶೋದ ತೆರೆದ ವಾಹನದಲ್ಲಿ ಮಿತ್ರಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸೈಯದ್ ಸಾದಿಕ್ ಅಲಿ ಶಿಹಬ್ ತಂಙಳ್ , ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರ್ ಸೇರಿದಂತೆ ಅನೇಕ ನಾಯಕರು ಭಾಗಿಯಾದರು