
ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಸಭೆಯು ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾರವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಯಿತು. ಸಭೆಯಲ್ಲಿ ರಾಜ್ಯದ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿ, ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.
- ವಕ್ಫ್ ತಿದ್ದುಪಡಿ ಕಾಯ್ದೆ 2024 : ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿ ವಖ್ಫ್ ಅಸ್ತಿಗಳ ನಿರ್ವಹಣೆ, ಶಕ್ತೀಕರಣ, ದಕ್ಷತೆ ಮತ್ತು ಅಭಿವೃದ್ಧಿಗಾಗಿ ಸಂಯುಕ್ತ ವಖ್ಫ್ ಕಾಯ್ದೆ ಎಂಬ ಹೆಸರಿನಲ್ಲಿ ವಕ್ಫ್ ತಿದ್ದುಪಡಿ ಎಂಬ ಕರಾಳ ಮಸೂದೆಯನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ನಿಲುವು ವಖ್ಫ್ ನ ನೈಜ ಪರಿಕಲ್ಪನೆಯನ್ನೇ ಇಲ್ಲವಾಗಿಸಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಸಮಿತಿಯು ಪ್ರತಿಪಾದಿಸಿದೆ.
ಸಂವಿಧಾನದ ಆರ್ಟಿಕಲ್ 26 ರ A,B,C,D ಕಲಮಿನ ಪ್ರಕಾರ ಒಂದು ಸಮುದಾಯವು ಅದರ ಧಾರ್ಮಿಕ ಆಚರಣೆಯ ಭಾಗವಾಗಿ ಸ್ಥಿರ ಹಾಗೂ ಚರಾಸ್ತಿಗಳನ್ನು ಹೊಂದುವ ಮತ್ತು ಅದನ್ನು ಕಾನೂನು ರೀತ್ಯಾ ನಿರ್ವಹಣೆ ಮಾಡುವ ಹಕ್ಕನ್ನು ಹೊಂದಿದ್ದರೂ ಮುಸ್ಲಿಮರ ವಕ್ಫ್ ವಿಚಾರದಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಮೂಗು ತೂರಿಸುತ್ತಿರುವುದು ವಕ್ಫ್ ಆಸ್ತಿಗಳನ್ನು ಕಬಳಿಕೆ ಮಾಡುವ ಮತ್ತು ಅವುಗಳಲ್ಲಿ ಮುಸ್ಲಿಮ್ ಸಮುದಾಯದ ನಿಯಂತ್ರಣವನ್ನು ಕಸಿದುಕೊಳ್ಳುವ ದುರುದ್ದೇಶದಿಂದಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಒಟ್ಟಾರೆಯಾಗಿ ಅಸಾಂವಿದಾನಿಕವಾದ ,ಯಾವುದೇ ವೈಜ್ಞಾನಿಕ ಸಮರ್ಥನೆಗಳಿಲ್ಲದ, ಕೇವಲ ಮುಸ್ಲಿಮರ ಅಸ್ತಿತ್ವ-ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನೇರ ದಾಳಿಗೈಯ್ಯುವ , ಕೋಮುವಾದಿ ಮನೋಭಾವದಿಂದ ರೂಪಿಸಲಾದ ವಕ್ಫ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರವು ಹಿಂಪಡೆಯುವವರೆಗೂ ಸಂವಿಧಾನ ಪರ ಧ್ವನಿಗಳು ತಿದ್ದುಪಡೆಯ ವಿರುದ್ಧ ನಿಚ್ಚಳ ಅಭಿಮತದೊಂದಿಗೆ ಹೋರಾಡಬೇಕಾಗಿದೆ.
2. 2025-26 ನೇ ಸಾಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಜೆಟ್ ನಲ್ಲಿ ಇನ್ನೂ ಖಾತ್ರಿಯಾಗದ ಹಲವು ಯೋಜನೆಗಳನ್ನು ಪೂರೈಸುವಂತೆ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಸಮಿತಿಯು ಇಲಾಖೆಯನ್ನು ಆಗ್ರಹಿಸುತ್ತದೆ.
ಸರ್ಕಾರಿ ಶಾಲೆಗಳಲ್ಲಿ ಪೌಷ್ಟಿಕ ಆಹಾರ ವಿತರಣಾ ಯೋಜನೆಯನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ ಶ್ಲಾಘಿಸುತ್ತಿದೆ .ಆದರೆ ಈ ಯೋಜನೆಯು ಪ್ರತಿಯೊಂದು ಶಾಲೆಗಳಲ್ಲಿ ಸಮರ್ಪಕವಾಗಿ ಪೂರೈಕೆಯಾಗುತ್ತಿದೆಯೇ ಎಂಬುವುದನ್ನು ಇಲಾಖೆಯು ಖಾತ್ರಿಪಡಿಸಿಕೊಳ್ಳಬೇಕು. ವಿತರಣೆಯಾಗುತ್ತಿರುವ ಆಹಾರದ ಗುಣಮಟ್ಟವನ್ನು ಪರಿಶೀಲಿಸಬೇಕು.
ಮಕ್ಕಳ ಆರೋಗ್ಯ ಹಾಗೂ ಪೌಷ್ಟಿಕತೆ ಕ್ಷೇತ್ರಕ್ಕೆ 10,000 ಕೋಟಿ ಹೆಚ್ಚುವರಿ ಅನುದಾನ ಒದಗಿಸಬೇಕು.ಜೊತೆಗೆ ಪ್ರತಿ ಮಹಿಳೆಗೂ ಗರ್ಭಧಾರಣೆಯ ಸಮಯದಲ್ಲಿ ಪೌಷ್ಟಿಕ ಆಹಾರ ಸಹಾಯಧನವನ್ನು ವಿತರಿಸಬೇಕು.ಇದು ಸ್ವಸ್ಥ ಕುಟುಂಬ ಹಾಗೂ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಅಗತ್ಯವಾಗಿದೆ.
ಇನ್ನು, ಮಹಿಳಾ ಸುರಕ್ಷತೆ ವಿಚಾರದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ತೀವ್ರ ಕಳವಳ ವ್ಯಕ್ತಪಡಿಸುತ್ತಿದೆ.ಪ್ರತಿ ನಿತ್ಯ ಕೇಳಿಬರುತ್ತಿರುವ ಅತ್ಯಾಚಾರ ಪ್ರಕರಣಗಳು ಮಹಿಳಾ ಸುರಕ್ಷತೆಗೆ ಅತೀ ದೊಡ್ಡ ಸವಾಲಾಗಿದೆ.ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತ್ವರಿತ ನ್ಯಾಯ ಪ್ರಕ್ರಿಯೆ ಹಾಗೂ ಕಠಿಣ ಕಾನೂನು ಕ್ರಮಗಳ ಮೂಲಕ ಈ ಪಿಡುಗನ್ನು ಶಾಶ್ವತವಾಗಿ ನಿರ್ನಾಮ ಮಾಡುವಲ್ಲಿ ಮುತುವರ್ಜಿ ವಹಿಸಬೇಕು.
ಮಹಿಳಾ ಮತ್ತು ಮಕ್ಕಳ ಮೇಲಿನ ಕೌಟುಂಬಿಕ, ಸಾಮಾಜಿಕ ಹಿಂಸೆ ಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು. ಮಹಿಳಾ ಸುರಕ್ಷತೆ ಅಭಿಯಾನಗಳ ಮುಖಾಂತರ ಜನಜಾಗೃತಿ ಮೂಡಿಸಬೇಕು.
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ವಿಧ್ಯಾರ್ಥಿ ವೇತನ, ಪ್ರೋತ್ಸಾಹ ಧನವನ್ನು ಒದಗಿಸಬೇಕು.
ತಡೆಯಾಗಿರುವ ಮೌಲಾನ ಆಝಾದ್ ವಿಧ್ಯಾರ್ಥಿ ವೇತನವನ್ನು ಮರುಸ್ಥಾಪಿಸಬೇಕು.
ಸಭೆಯಲ್ಲಿ ಉಪಾಧ್ಯಕ್ಷೆ ಶಾಝಿಯ ಬೆಂಗಳೂರು, ಕಾರ್ಯದರ್ಶಿ ಝುಲೈಖ, ಶಾಹಿದಾ ತಸ್ನೀಮ್ ,ಶಬಾನ ಬೆಂಗಳೂರು, ಜಬೀನ್ ಮೈಸೂರು, ಆಯಿಷಾ ಬೆಂಗಳೂರು ಹಾಜರಿದ್ದರು.. ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆಯವರು ಸ್ವಾಗತಿಸಿ ವರದಿಯನ್ನು ವಾಚಿಸಿದರು.ಹಾಗೂ ರಾಜ್ಯ ಕಾರ್ಯದರ್ಶಿ ಝುಲೈಖರವರು ಧನ್ಯವಾದವಿತ್ತರು.