ಕಾರ್ಕಳ: ಯುವತಿಯೋರ್ವಳ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಾದ ಅಲ್ತಾಫ್ ಹಾಗೂ ಸುಧೀರ್ ಎಂಬಾತನನ್ನು ಬಂಧಿಸಿರುವುದಾಗಿ ಎಸ್.ಪಿ. ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕಾರ್ಕಳದ ಅಯ್ಯಪ್ಪ ನಗರದ ಬಳಿಯ ಹಾಡಿಯಲ್ಲಿ ಕುಕ್ಕುಂದೂರು ಗ್ರಾಮದ 21ರ ವಯಸ್ಸಿನ ಯುವತಿ ವಾಸವಾಗಿದ್ದು, ಶುಕ್ರವಾರ ಕಾರಿನಲ್ಲಿ ಕರೆದುಕೊಂಡು ಹೋಗಿ, ಬಿಯರ್ಗೆ ಅಮಲು ಪದಾರ್ಥ ಮಿಶ್ರಣ ಮಾಡಿ ಬಳಿಕ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಯುವತಿಯ ತಾಯಿ ದೂರು ನೀಡಿದ್ದಾರೆ. ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಶುಕ್ರವಾರ ಮಧ್ಯಾಹ್ನದ ವೇಳೆಗೆ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಟ್ಟು ಮೂರು ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಯುವತಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಈ ಪೈಕಿ ಪ್ರಮುಖ ಆರೋಪಿ ಅಲ್ತಾಫ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ, ಪ್ರಮುಖ ಆರೋಪಿ ಅಲ್ತಾಫ್ ಗೆ ಮದ್ಯವನ್ನು ಪೂರೈಸಿದ್ದ ಇನ್ನೋರ್ವ ಆರೋಪಿ ಸುಧೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.