ಅಂಕೋಲಾ: ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನ ಮಣ್ಣಿನಲ್ಲಿ ಕೊಚ್ಚಿ ಹೋಗಿದ್ದರು. ಅದರಲ್ಲಿ 8 ಜನರನ್ನು ಪತ್ತೆ ಮಾಡಲಾಗಿತ್ತು.
ಇನ್ನುಳಿದ ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ ಲೋಕೇಶ್ ನಾಯ್ಕ ಹಾಗೂ ಜಗನ್ನಾಥ ನಾಯ್ಕ ಎಂಬುವವರಿಗಾಗಿ ಹುಡುಕಾಟ ನಡೆಸಲಾಗಿತ್ತು. ಇದೀಗ ಲಾರಿಯೊಳಗೆ ಅರ್ಜುನನ ಮೃತದೇಹ ಎರಡು ತುಂಡಾಗಿ ಪತ್ತೆಯಾಗಿದೆ. ಇನ್ನೂ ಇಬ್ಬರು ಕಣ್ಮರೆಯಾದವರ ಬಗ್ಗೆ ಶೋಧ ನಡೆಯಬೇಕಿದೆ
ಗುಡ್ಡ ಕುಸಿತದ ಸಂದರ್ಭದಲ್ಲಿ ಅಪಾರ ಪ್ರಮಾಣದ ಮಳೆಯಾಗುತ್ತಿದ್ದ ಕಾರಣ ಗಂಗಾವಳಿ ನದಿಯಲ್ಲಿ ಪ್ರವಾಹದಲ್ಲಿ ಲಾರಿ ಸಮೇತ ಅರ್ಜುನ್ ನಾಪತ್ತೆಯಾಗಿದ್ದರು. ಇದೀಗ ಮುಳುಗು ತಜ್ಞರ ಸತತ ಪ್ರಯತ್ನದಿಂದ ಅರ್ಜುನ್ ಶವ ಸಿಕ್ಕಿದೆ.
ಜುಲೈ 16 ರಂದು ಸಂಭವಿಸಿದ ಗುಡ್ಡ ಭೂಕುಸಿತದಲ್ಲಿ ಕೇರಳದ ಕೋಝಿಕ್ಕೋಡ್ ಮೂಲದ ಲಾರಿ ಚಾಲಕ ಅರ್ಜುನ್ ನಾಪತ್ತೆಯಾಗಿದ್ದರು. ಅರ್ಜುನ್ ಲಾರಿ ಸಮೇತ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಮೇರೆಗೆ ಸತತ 3 ದಿನಗಳ ಕಾಲ ಹುಡುಕಾಟ ನಡೆಸಿದರೂ ಅರ್ಜುನ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಪ್ರತಿಕೂಲ ಹವಾಮಾನದಿಂದಾಗಿ ಶೋಧ ಕಾರ್ಯಾಚರಣೆಯನ್ನು ಆಗಿಂದಾಗೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಗಂಗಾವಳಿ ನದಿಯಲ್ಲಿ ನಡೆಸಿದ 3ನೇ ಹಂತದ ಕಾರ್ಯಾಚರಣೆಯ 6ನೇ ದಿನ ಶವ ಮತ್ತು ಲಾರಿ ಎರಡನ್ನೂ ಪತ್ತೆ ಹಚ್ಚಲಾಗಿದೆ.