December 22, 2024
Ration-Card-1-698x1024

ಬೆಂಗಳೂರು : ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್‌ಗಳ ರದ್ದು ವಿಚಾರ ಬಿರುಗಾಳಿಯನ್ನೇ ಎಬ್ಬಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಅರ್ಹರ ಬಿಪಿಎಲ್‌ಕಾರ್ಡ್‌ಗಳನ್ನು ರದ್ದು ಮಾಡದಂತೆ ಈಗಾಗಲೇ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದರು. ಅಷ್ಟೇ ಅಲ್ಲ, ಒಂದು ವೇಳೆ ಅರ್ಹರ ಫಲಾನುಭವಿಗಳ ಕಾರ್ಡ್‌ ರದ್ದುಗೊಂಡಿದ್ದರೆ ಮತ್ತೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಟ್ವೀಟ್ ಮೂಲಕವೂ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ, ನಾವು ಬಡವರ ಅನ್ನ ಕಿತ್ತುಕೊಳ್ಳಲ್ಲ ಅಂತಾ ಸ್ಪಷ್ಟಪಡಿಸಿದ್ದರು. ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸುದ್ದಿಗೋಷ್ಠಿ ನಡೆಸಿ ಅರ್ಹರ ಕಾರ್ಡ್‌ಗಳು ರದ್ದುಗೊಂಡಿದ್ದರೆ ಒಂದುವಾರದೊಳಗೆ ಸರಿಪಡಿಸೋದಾಗಿ ಹೇಳಿದ್ದರು.
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಆಹಾರ ಇಲಾಖೆ ಪಡಿತರ ಚೀಟಿಗಳ ಪರಿಷ್ಕರಣೆ ಮತ್ತು ತಿದ್ದುಪಡಿ ಆರಂಭಿಸುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ರದ್ದಾಗಿರುವ ಬಿಪಿಎಲ್‌ ಕಾರ್ಡ್‌ಗಳ ತಿದ್ದುಪಡಿ ಕಾರ್ಯ ನಡೆಯಲಿದೆ. ಆಧಾರ್ ಪ್ಯಾನ್ ಕಾರ್ಡ್, ಐಟಿ ರಶೀದಿ ಮೂಲಕ ಅರ್ಹತೆ ಹೊಂದಿರುವವರು ಕಾರ್ಡ್‌ಗಳನ್ನ ಸರಿ ಪಡಿಸಿಕೊಳ್ಳಬಹುದಾಗಿದೆ‌.

ಬಿಪಿಎಲ್ ಕಾರ್ಡ್ ತಿದ್ದುಪಡಿ ಹೇಗೆ?
ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಬೇಕು. ಸರ್ಕಾರಿ ನೌಕರರ, ತೆರಿಗೆ ಪಾವತಿದಾರರ ಅನ್ನೋದನ್ನು ಪರಿಶೀಲಿಸಬೇಕು. ಕಾರ್ಡ್ ಹೊಂದಿರುವವರು ಬಡವರು ಇದ್ದಾರಾ? ಶ್ರೀಮಂತರು ಇದ್ದಾರಾ? ಅಂತ ಮನೆ ಪರಿಶೀಲಿಸಬೇಕು. ಆರ್‌ಡಿ ನಂಬರ್ ಪರಿಶೀಲನೆ ಮಾಡಬೇಕು. ಸ್ಥಳ ಪರಿಶೀಲನೆ ಜೊತೆಗೆ ದಾಖಲೆ ಪರಿಶೀಲನೆ ಮಾಡಬೇಕು. ಹೀಗೆ ಆಹಾರ ನಿರೀಕ್ಷಕರು ಒನ್ ಬೈ ಒನ್ ಆಗಿ ಕಾರ್ಡ್‌ಗಳನ್ನು ಪರಿವರ್ತನೆ ಮಾಡಬೇಕಿದೆ. ಏಕಾಏಕಿ ಮೂಲ ಸ್ಥಾನಕ್ಕೆ ಶಿಫ್ಟ್ ಮಾಡಲು ಆಗಲ್ಲ. ಎನ್‌ಐಸಿ ಸಾಫ್ಟ್‌ವೇರ್‌ ಮೂಲಕ ಕಾರ್ಡ್ ಕನ್ವರ್ಟ್ ಮಾಡಬೇಕು. ಕಾರ್ಡ್ ಬದಲಿಸಲು ಕನಿಷ್ಠ 10 ರಿಂದ 15 ದಿನ ಸಮಯಾವಕಾಶ ಬೇಕಾಗುತ್ತದೆ.

ಅದೇನೆ ಇರಲಿ, ರದ್ದಾದ ಕಾರ್ಡ್‌ನಿಂದ ಅಕ್ಕಿ ಬರದೇ ಜನ ಕಚೇರಿಯಿಂದ ಕಚೇರಿಗೆ ಅಲೆಯುತ್ತಾ ಇದ್ದಾರೆ. ಹೀಗಾಗಿ ಎಚ್ಚೆತ್ತಿರುವ ಸರ್ಕಾರ ಇಂದಿನಿಂದ ಬಿಪಿಎಲ್ ಕಾರ್ಡ್​​ಗಳ ಪರಿಶೀಲನೆಗೆ ಮುಂದಾಗಿದೆ. ಅರ್ಹತೆ ಇದ್ದರೂ ಬಿಪಿಎಲ್ ಕಾರ್ಡ್‌ನಿಂದ ವಂಚಿತರಾಗಿರುವವರಿಗೆ ಶೀಘ್ರವೇ ನ್ಯಾಯ ದೊರಕಿಸಿಕೊಡಬೇಕಿದೆ.

Leave a Reply

Your email address will not be published. Required fields are marked *