ಮಂಗಳೂರು: ಅಮೆರಿಕನ್ ಕಮೊಡಿಟೀಸ್‌ನಲ್ಲಿ ಆನ್‌ಲೈನ್ ಮೂಲಕ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಿ ಹಿರಿಯ ವ್ಯಕ್ತಿಗೆ 1.77 ಕೋಟಿ ರೂ. ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2025ರ ಡಿ.24ರಂದು ಯುನೈಟೆಡ್ ಕಿಂಗ್ಡಮ್ ಕೋಡ್ ಹೊಂದಿರುವ ಅಪರಿಚಿತ ನಂಬರ್‌ನಿಂದ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ತನ್ನನ್ನು ಶೊಯಿಬ್ ಘೋರಿ ವೆಂಟ್ರೇಡ್ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಆನ್‌ಲೈನ್ ಅಮೆರಿಕನ್ ಕಮೊಡಿಟೀಸ್‌ನಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಬರುವುದಾಗಿ ನಂಬಿಸಿದ್ದ. ನೀವು ಭಾರತೀಯ ರೂಪಾಯಿಯಲ್ಲಿ ನಮಗೆ ಹಣ ವರ್ಗಾಯಿಸಿದರೆ ನಾವು ಅದನ್ನು ಅಮೆರಿಕನ್ ಡಾಲರ್‌ಗೆ ಪರಿವರ್ತಿಸಿ ಹೂಡಿಕೆ ಮಾಡುವುದಾಗಿ ತಿಳಿಸಿದ್ದ. ನಂತರ ಇಮೇಲ್, ವಾಟ್ಸ್‌ಆ್ಯಪ್ ಮತ್ತು ಫೋನ್ ಕರೆ ಮಾಡಿ ಮಾತನಾಡುತ್ತಿದ್ದ. ಆತನ ಮಾತನ್ನು ನಂಬಿ ಮೊದಲಿಗೆ ಸ್ವಲ್ಪ ಪ್ರಮಾಣದ ಹಣವನ್ನು ಹೂಡಿಕೆ ಮಾಡಿದ್ದೆ. ಅದಕ್ಕೆ ಲಾಭಾಂಶವಾಗಿ ಖಾತೆಗೆ ಸ್ವಲ್ಪ ಹಣ ಜಮೆ ಆಗಿತ್ತು.
ಇದರಿಂದ ನಂಬಿಕೆ ಬಂದು ಇನ್ನೂ ಅಧಿಕ ಲಾಭ ಪಡೆಯುವ ಉದ್ದೇಶದಿಂದ ಜ.5ರಿಂದ ಫೆ.2ರವರೆಗೆ ಅಪರಿಚಿತ ವ್ಯಕ್ತಿ ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್, ನೆಫ್ಟ್ ಹಾಗೂ ಐಎಂಪಿಎಸ್ ಮೂಲಕ 1,77,64,668.22 ರೂ.ವನ್ನು ಹೂಡಿಕೆ ಮಾಡಿದ್ದೆ. ಬಳಿಕ ಹೂಡಿಕೆ ಮಾಡಿದ ಹಣ, ಲಾಭಾಂಶ ಯಾವುದನ್ನೂ ನೀಡದೆ ವಂಚಿಸಿದ್ದಾನೆ ಎಂದು 74ರ ಹರೆಯದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸೆನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
