ಮಂಗಳೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಈಗಾಗಲೇ ನೀಡಿರುವ ಆರೋಗ್ಯ ವಿಮೆ ಕವರೇಜನ್ನು ರೂ. 5 ಲಕ್ಷಕ್ಕೆ ಏರಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ. ಅವರು ಸೂಚಿಸಿದ್ದಾರೆ.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಫಾಯಿ ಕರ್ಮಚಾರಿ/ಮ್ಯಾನುವೆಲ್ ಸ್ಕ್ಯಾವೆಂಜರ್ ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ಮಹಾನಗರಪಾಲಿಕೆಯ ನಿಧಿಯಿಂದ 708 ಮಂದಿ ಪೌರಕಾರ್ಮಿಕರು ಮತ್ತು ಅವರ ಅವಲಂಭಿತರಿಗೆ ಖಾಸಗಿ ವಿಮಾ ಕಂಪೆನಿ ಮೂಲಕ ರೂ. 3ಲಕ್ಷದ ಆರೋಗ್ಯ ವಿಮೆ ನೀಡಲಾಗಿದೆ. ಈ ವಿಮಾ ಮೊತ್ತವು ಕಡಿಮೆಯಾಗಿದ್ದು, ಗಂಭೀರ ಖಾಯಿಲೆ ಚಿಕಿತ್ಸೆಗಳಿಗೆ ಸಾಕಾಗುವುದಿಲ್ಲ ಎಂದು ಪೌರಕಾರ್ಮಿಕರಿಂದ ಮನವಿಗಳು ಬಂದಿದ್ದು, ಈ ನಿಟ್ಟಿನಲ್ಲಿ ಮುಂದಿನ ಸಾಲಿನಿಂದ ಆರೋಗ್ಯ ವಿಮಾ ಮೊತ್ತವನ್ನು ರೂ. 5 ಲಕ್ಷಕ್ಕೆ ಏರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪೌರಕಾರ್ಮಿಕರ ಪಟ್ಟಿಯಲ್ಲಿ ನಕಲಿ ವ್ಯಕ್ತಿಗಳು ಸೇರ್ಪಡೆಯಾಗಿರುವ ದೂರಿನ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಅವರು ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ಸೂಚಿಸಿದರು. ಸರಕಾರ ನಿಗದಿಪಡಿಸಿದ ಕರ್ತವ್ಯಗಳ ಬದಲಾಗಿ ಇತರೆ ಅನ್ಯ ಕೆಲಸಗಳಿಗೆ ಪೌರಕಾರ್ಮಿಕರನ್ನು ನಿಯೋಜಿಸಬಾರದು ಎಂದು ಈಗಾಗಲೇ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದರು.
ಸಂಜೀವಿನಿ ಒಕ್ಕೂಟದಲ್ಲಿ ದುಡಿಯುತ್ತಿರುವ ಸಿಬ್ಬಂಧಿಗಳಿಗೆ ಗುತ್ತಿಗೆದಾರರ ಬದಲು ಗ್ರಾಮ ಪಂಚಾಯತ್‍ಗಳ ನೇರ ಅಧೀನದಲ್ಲಿ ವೇತನ ಪಾವತಿಸುವ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಪೌರಕಾರ್ಮಿಕರ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲು ಈಗಾಗಲೇ ಪೌರಾಡಳಿತ ನಿರ್ದೇಶನಾಲಯದ ಮಾರ್ಗದರ್ಶನ ಕೋರಲಾಗಿದೆ ಎಂದು ಅವರು ತಿಳಿಸಿದರು.