‘ಆಪರೇಷನ್ ಟೈಗರ್’ ಕಾರ್ಯಾಚರಣೆ ನಡೆಸಿದ ಮನಾಪ!
ಮಂಗಳೂರು: ಲೇಡಿಹಿಲ್ ಹಾಗೂ ಕೆಪಿಟಿ ಬಳಿಯ ಅನಧಿಕೃತ ಗೂಡಂಗಡಿಗಳನ್ನು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಇಂದು ನಡೆದ ‘ಆಪರೇಷನ್ ಟೈಗರ್’ ಕಾರ್ಯಾಚರಣೆಯಲ್ಲಿ ತೆರವುಗೊಳಿಸಲಾಯಿತು.
ಲೇಡಿಹಿಲ್ ಸರ್ಕಲ್ ಬಳಿಯ ಸುಮಾರು 25 ರಿಂದ 30 ಸಣ್ಣ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ಕಾರ್ಯಾಚರಣೆಗೆ ಅಡ್ಡಿಪಡಿಸಿದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ತೆರವುಗೊಳಿಸಿದ ಅಂಗಡಿಗಳಲ್ಲಿ ತೆಂಗಿನಕಾಯಿ, ಫಾಸ್ಟ್ ಫುಡ್, ಪಾನಿ ಪುರಿ ಮತ್ತು ಆಮ್ಲೆಟ್ಗಳನ್ನು ಮಾರಾಟ ಮಾಡಲಾಗುತ್ತಿತ್ತು.
ಮನಪಾ ಉಪ ಆಯುಕ್ತೆ ರೇಖಾ ಶೆಟ್ಟಿ, ಆರೋಗ್ಯಾಧಿಕಾರಿ ಡಾ ಮಂಜಯ್ಯ ಶೆಟ್ಟಿ, ಕಂದಾಯ ಇಲಾಖೆ ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇನ್ನು ಬರ್ಕೆ ಹಾಗೂ ಕದ್ರಿ ಠಾಣಾ ಪೊಲೀಸರು ಭದ್ರತೆ ಒದಗಿಸಿದರು.
ಇನ್ನು ಬೀದಿ ಬದಿ ವ್ಯಾಪಾರಿಗಳು ಮತ್ತು ಬೀದಿ ಆಹಾರದ ಬಗ್ಗೆ ಹೆಚ್ಚುತ್ತಿರುವ ದೂರುಗಳಿಂದ, ಪಾದಚಾರಿಗಳಿಗೆ ತೊಂದರೆ ಆಗುತ್ತಿರುವುದರಿಂದ ಹಾಗೂ ಸಾರ್ವಜನಿಕರಿಗೆ ಆರೋಗ್ಯದ ಆತಂಕವನ್ನು ಹೆಚ್ಚಿಸುವ ಕಾರಣದಿಂದಾಗಿ ಜುಲೈ 29 ರಂದು ‘ಆಪರೇಷನ್ ಟೈಗರ್’ ಅನ್ನು ಪುನರಾರಂಭ ಮಾಡಲಾಗುವುದು ಎಂದು ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಈ ಹಿಂದೆ ತಿಳಿಸಿದ್ದರು.