ಬಂಟ್ವಾಳ: ಕಾಂಗ್ರೆಸ್ ಪಕ್ಷ ಕುಟುಂಬವಿದ್ದಂತೆ. ನೂತನ ಪದಾಧಿಕಾರಿಗಳು ಹೊಂದಾಣಿಕೆಯಿಂದ ಪಕ್ಷ ಸಂಘಟನೆ ಮಾಡಬೇಕಾಗಿದೆ. ನೀಡಿದ ಜವಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುವಂತೆ ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದರು.
ಪಾಣೆಮಂಗಳೂರು ಸಾಗರ್ ಅಡಿಟೋರಿಯಂ ಹಾಲ್ ನಲ್ಲಿ ನಡೆದ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಮತ್ತು ಎನ್.ಎಸ್.ಯು.ಐ.ನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇಚ್ಚಾಶಕ್ತಿಯಿಂದ ಮುಖಂಡರು ಕಾರ್ಯಕರ್ತರು ಕೆಲಸ ಮಾಡಿದರೆ ಮತ್ತೆ ಕಾಂಗ್ರೇಸ್ ನ ಕೈಗೆ ಅಧಿಕಾರ ಸಿಗುವುದು ನಿಶ್ಚಿತ. ನಾಯಕರುಗಳು ಹೊಂದಾಣಿಕೆಯ ರಾಜಕಾರಣ ಮಾಡದೆ ಕಾಂಗ್ರೆಸ್ ಪಕ್ಷದ ಸಿದ್ದಾಂತದಡಿಯಲ್ಲಿ ನಿಷ್ಠೆಯ ರಾಜಕಾರಣ ಮಾಡಿದರೆ ಮತ್ತೊಮ್ಮೆ ಕಾಂಗ್ರೆಸ್ ಬಲಿಷ್ಠವಾಗಲು ಸಾಧ್ಯವೆಂದರು.
ಚುನಾವಣೆಯಲ್ಲಿ ಸೋಲು ಗೆಲುವು ಅದು ನಿಶ್ಚಿತ, ಆದರೆ ಪ್ರಾಮಾಣಿಕ ಕೆಲಸ ಮಾಡಬೇಕು. ದ.ಕ.ಜಿಲ್ಲೆಯ ನಿಷ್ಠಾವಂತ ಕಾರ್ಯಕರ್ತರೇ ಕಾಂಗ್ರೆಸ್ ನ ಶಕ್ತಿಯಾಗಿದೆ. ಇತ್ತೀಚೆಗಿನ ಪುರಸಭೆಯ ವಿದ್ಯಮಾನಗಳ ಬಗ್ಗೆ ಸಂಸದರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪುರಸಭೆಯಲ್ಲಿ ಈ ಹಿಂದೆ ದಿನೇಶ್ ಭಂಡಾರಿ ಅಧ್ಯಕ್ಷರಾದದ್ದು ಹೇಗೆ, ಮುಸ್ಲಿಂ ಲೀಗ್ ನ ಸಹಾಯ ಪಡೆದು ಅಧ್ಯಕ್ಷರಾದಾಗ ಡಿ.ಎನ್.ಎ. ಯಾರದಾಗಿತ್ತು ಎಂದು ಪ್ರಶ್ನಿಸಿದರು.
ಸ್ಥಳೀಯ ಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡಿದ್ದೇವೆ. ಬೂಟಾಟಿಕೆಯ ಕೆಲಸ ಮಾಡುವುದನ್ನು ಬಿಟ್ಟು ಅಂತಾರಾತ್ಮತೆಯನ್ನು ಗುರುತಿಸಿಕೊಂಡು ಅಧಿಕಾರ ನೀಡಬೇಕು ಎಂಬ ಉದ್ದೇಶದಿಂದ ಜವಾಬ್ದಾರಿಯನ್ನು ನೀಡಿದ್ದೇವೆ ಎಂದು ತಿಳಿಸಿದರು. ಬಂಟ್ವಾಳ ಕಾಂಗ್ರೆಸ್ ನ ಎರಡು ಬ್ಲಾಕ್ ಗಳಿಗೂ ಸುಂದರವಾದ ಕಚೇರಿ ಇರುವುದು ಅತ್ಯಂತ ಸಂತಸದ ವಿಷಯ. ದೇಶದಲ್ಲಿ ಬೆಲೆ ಏರಿಕೆ ಗಗನಕ್ಕೇರಿದ್ದು, ಬಿಜೆಪಿಯಿಂದ ನಿರಂತರವಾಗಿ ಜನರನ್ನು ಮೋಸಮಾಡಿ, ಜಾತಿ ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೇರುವ ಕೆಲಸ ಆಗಿದೆ ಎಂದರು.