

ಮಂಗಳೂರು: ಇತ್ತೀಚೆಗೆ ಕುಡುಪು ಪ್ರದೇಶದಲ್ಲಿ ಓರ್ವ ವ್ಯಕ್ತಿಯನ್ನು ಮುಸ್ಲಿಮ್ ಎಂಬ ಕಾರಣಕ್ಕಾಗಿ ದುಷ್ಕರ್ಮಿಗಳ ಗುಂಪು ಹತ್ಯೆಗೈದಿದ್ದು, ಪೊಲೀಸು ಇಲಾಖೆ ಕಾರ್ಯಾಚರಣೆ ನಡೆಸಿ ಹಲವರನ್ನು ಬಂಧಿಸಿದೆ. ಗೃಹ ಸಚಿವರು ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿ, ಹತ್ಯೆಗೆ ‘ ಕಾರಣ’ ವನ್ನು ಹೇಳಿ, ಹತನಾದ ವ್ಯಕ್ತಿ ಪಾಕಿಸ್ತಾನ ಝಿಂದಾಬಾದ್ ಕೂಗಿದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಗೃಹ ಸಚಿವರ ಹೇಳಿಕೆ, ಸಂಬಂಧಿತ ಘಟನೆಯನ್ನು ಸರಿದೂಗಿಸುವ ಪ್ರಯತ್ನದಲ್ಲಿ ಹೇಳಿದಂತಿದೆ ಎಂದು ಮಾಜಿ ಮೇಯರ್ ಕೆ.ಅಶ್ರಫ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ರೀತಿಯ ಹೇಳಿಕೆ ಸ್ವೀಕಾರಾರ್ಹವಾಗಲಾರದು. ಇಂತಹ ಹೇಳಿಕೆಗಳು ಜನರು ಕಾನೂನನ್ನು ಕೈಗೆತ್ತಿಕೊಳ್ಳಲು ಪ್ರೋತ್ಸಾಹ ನೀಡಿದಂತಿದೆ. ಗೃಹ ಸಚಿವರು ಸರಕಾರದ ಭಾಗವಾಗಿ ಅಪರಾಧ ತಡೆಯುವ ನಿಟ್ಟಿನ ಹೇಳಿಕೆ ನೀಡಬೇಕಿತ್ತು, ಹೊರತು ಘಟನೆಯನ್ನು ಸರಿದೂಗಿಸುವ ಹೇಳಿಕೆ ನೀಡಿ ಯಾವುದೂ ಒಂದು ವಿಭಾಗವನ್ನು ತೃಪ್ತಿಪಡಿಸುವ ರೀತಿಯಲ್ಲಿರುವುದು ಖೇದಕರ. ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ತಡೆಯುವ ಹೇಳಿಕೆಯನ್ನು ಜನರು ಗೃಹ ಸಚಿವರಿಂದ ನಿರೀಕ್ಷಿಸುತ್ತಿದ್ದಾರೆ. ಕರ್ನಾಟಕದ ಕಲಬುರ್ಗಿಯಲ್ಲಿ ಇತ್ತೀಚೆಗೆ ಇತರ ದೇಶದ ಧ್ವಜ ಹಾರಿಸಿದ ಕೃತ್ಯದಾರರ ಹಿನ್ನೆಲೆ ಜನರ ಮನಸ್ಸಿನಿಂದ ಮರೆಯಾಗುವ ಮೊದಲೇ ಗೃಹ ಸಚಿವರು ಘಟನೆಯನ್ನು ಸರಿದೂಗಿಸುವ ಹೇಳಿಕೆ ನೀಡಿರುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.