ಮಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರೆದಿದೆ. ಕರಾವಳಿ ಹಾಗೂ ದಕ್ಷಿಣ ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಇದೇ ಪರಿಸ್ಥಿತಿ ಇನ್ನೆರಡು ದಿನ ಮುಂದುವರೆಯಲಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಆಗಸ್ಟ್ 3 ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 30 ರಿಂದ ಆಗಸ್ಟ್ 3 ರವರೆಗೆ ಹಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ದಕ್ಷಿಣಕನ್ನಡ ಜಿಲ್ಲಾಧಿಕಾರಿ ಬೀಚ್, ಪ್ರವಾಸಿ ತಾಣಗಳಲ್ಲಿ, ಹೆಚ್ಚು ನೀರಿರುವ ಸ್ಥಳಗಳಲ್ಲಿ ಹುಚ್ಚಾಟ ಆಡುವವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದು, ಇಂತಹ ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್ ಮಾಡಿದ್ರೆ ಕೇಸ್ ಬೀಳುತ್ತೆ ಎಂದು ಹೇಳಿದ್ದಾರೆ. ಪ್ರವಾಸಿ ತಾಣ, ಬೀಚ್ ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಈಗಾಗಲೇ ಅಪಾಯಕಾರಿ ಬೋರ್ಡ್ ಅಳವಡಿಸಲಾಗಿದೆ. ಅಪಾಯಕಾರಿ ಬೋರ್ಡ್ ಜೊತೆಗೆ ಕೆಲವು ಕಾನೂನುಗಳೂ ಅನ್ವಯಿಸುತ್ತದೆ. ಕಾನೂನು ಮೀರಿ ರೀಲ್ಸ್ ಅಥವಾ ಸಾಹಸ ಮಾಡಲು ಮುಂದಾದ್ರೆ ಎಫ್.ಐ.ಆರ್ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.