February 5, 2026

ಮಂಗಳೂರು: ‘ವಿಧಾನಸೌಧದ ಅವರಣದಲ್ಲಿ ಸಾಹಿತ್ಯ ಉತ್ಸವ, ಸಾಂಸ್ಕೃತಿಕ ಉತ್ಸವ, ಪುಸ್ತಕ ಮೇಳ, ಆಹಾರ ಮೇಳಗಳನ್ನು ಇದೇ 27ರಿಂದ ಮಾರ್ಚ್‌ 3 ರವರೆಗೆ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ಸ್ಪೀಕರ್ ಯು.ಟಿ.ಖಾದರ್‌ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಈ ಕುರಿತು ಮಾಹಿತಿ ನೀಡಿದ ಅವರು, ‘ಸಾಹಿತಿಗಳು, ಬರಹಗಾರರು, ವಿದ್ವಾಂಸರನ್ನು ವಿಧಾನಸಭೆಗೆ ಹತ್ತಿರವಾಗಿಸುವ ಉದ್ದೇಶದಿಂದ ಸಾಹಿತ್ಯ ಉತ್ಸವ ಆಯೋಜಿಸಲಾಗುತ್ತಿದೆ. ಒಬ್ಬ ಸಾಹಿತಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದೇವೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರಲಿದೆ. ಭದ್ರತೆ ದೃಷ್ಟಿಯಿಂದ ವಿಶೇಷ ತಪಾಸಣಾ ವ್ಯವಸ್ಥೆ ಮಾಡುತ್ತೇವೆ. ಈ ಸಾಹಿತ್ಯ ಉತ್ಸವವನ್ನು ಪ್ರತಿ ವರ್ಷವೂ ಏರ್ಪಡಿಸಬೇಕು ಎಂಬುದು ನಮ್ಮ ಆಶಯ’ ಎಂದರು.‌

‘ಈ ಸಾಹಿತ್ಯ ಉತ್ಸವಕ್ಕೆ ಸೂಕ್ತ ಹೆಸರು ಇಡಲು ಹಾಗೂ ಲಾಂಛನ ರಚಿಸಲು ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡುತ್ತೇವೆ. ಉತ್ತಮ ಹೆಸರು ಸೂಚಿಸುವವರಿಗೆ ಹಾಗೂ ಲಾಂಛನ ರಚಿಸುವವರಿಗೆ ಸೂಕ್ತ ಬಹುಮಾನವಿದೆ. ಆಸಕ್ತರು ಹೆಸರು ಅಥವಾ ಲಾಂಛನ ವನ್ನು ಸಚಿವಾಲಯಕ್ಕೆ ಇ–ಮೇಲ್‌ ಮಾಡಬಹುದು (secy-kla-kar@nic.in) ಅಥವಾ ವಾಟ್ಸ್‌ ಆ್ಯಪ್ (9448108798) ಮೂಲಕವೂ ಕಳುಹಿಸಬಹುದು’ ಎಂದರು.

‘ವಿಧಾನ ಮಂಡಲಗಳ ಅಧಿವೇಶನವನ್ನು ಮಾರ್ಚ್‌ 3ರಿಂದ ಆರಂಭಿಸುವ ಹಾಗೂ ಮಾರ್ಚ್ 7ರಂದು ಬಜೆಟ್ ಮಂಡನೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಈ ಬಗ್ಗೆ ಸರ್ಕಾರವೇ ದಿನಾಂಕವನ್ನು ಅಂತಿಮಗೊಳಿಸಲಿದೆ’ ಎಂದು ತಿಳಿಸಿದರು.