March 22, 2026
gyandev1

ಜೈಪುರ: ಕೇರಳದ ವಯನಾಡು ಈಗ ಅಕ್ಷರಶಃ ಮಸಣದಂತಾಗಿದೆ. ಭಾರಿ ಮಳೆ, ಭೀಕರ ಭೂಕುಸಿತದಿಂದಾಗಿ 350ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇನ್ನೂ 300 ಜನ ನಾಪತ್ತೆಯಾಗಿದ್ದಾರೆ. ಎಲ್ಲೆಂದರಲ್ಲಿ ಶವಗಳು ಸಿಗುತ್ತಿವೆ. ಸಾವಿರಾರು ಎಕರೆ ಕೃಷಿ ಭೂಮಿ ಹಾಳಾಗಿದೆ. ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಈಗಲೂ ಹಗಲು-ರಾತ್ರಿ ಕಾರ್ಯಾಚರಣೆ ನಡೆಯುತ್ತಿದೆ. ಇನ್ನು, ಭೂಕುಸಿತಕ್ಕೆ ಅರಣ್ಯ ನಾಶ, ರೆಸಾರ್ಟ್‌ಗಳ ನಿರ್ಮಾಣ ಸೇರಿ ಹಲವು ಕಾರಣಗಳನ್ನು ಗುರುತಿಸಲಾಗುತ್ತಿದೆ. ಇದರ ಬೆನ್ನಲ್ಲೇ, “ಕೇರಳದಲ್ಲಿ ಭೂಕುಸಿತ ಉಂಟಾಗಲು ಗೋವುಗಳ ಹತ್ಯೆಯೇ ಕಾರಣ” ಎಂಬುದಾಗಿ ಬಿಜೆಪಿ ನಾಯಕ ಜ್ಞಾನದೇವ್‌ ಅಹುಜಾ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ರಾಜಸ್ಥಾನದ ಬಿಜೆಪಿ ನಾಯಕ, ಮಾಜಿ ಶಾಸಕ ಜ್ಞಾನದೇವ್‌ ಅಹುಜಾ ಹೇಳಿಕೆ ಈಗ ಭಾರಿ ಚರ್ಚೆಗೂ ಗ್ರಾಸವಾಗಿದೆ. “ವಯನಾಡಿನಲ್ಲಿ ಭೂಕಂಪ ಸಂಭವಿಸಿರುವುದು ಗೋಹತ್ಯೆಯ ಪರಿಣಾಮವಾಗಿದೆ. ಕೇರಳದಲ್ಲಿ ಗೋಹತ್ಯೆಯನ್ನು ನಿಲ್ಲಿಸದಿದ್ದದರೆ ಇಂತಹ ಹಲವು ದುರಂತಗಳು ಸಂಭವಿಸುತ್ತಲೇ ಇರುತ್ತವೆ. 2018ರಿಂದಲೂ ನಾನು ಇದನ್ನು ಗಮನಿಸುತ್ತಿದ್ದೇನೆ. ಎಲ್ಲೆಲ್ಲಿ ಗೋವುಗಳ ಹತ್ಯೆಯು ಜಾಸ್ತಿಯಾಗಿರುತ್ತದೆಯೋ, ಅಲ್ಲೆಲ್ಲ ಭೂಕುಸಿತ ಸಂಭವಿಸುತ್ತಿರುತ್ತವೆ. ಕೇರಳದ ವಯನಾಡು ಇದಕ್ಕೆ ನಿದರ್ಶನ” ಎಂದು ಮಾಧ್ಯಮವೊಂದರ ಜತೆ ಮಾತನಾಡುವಾಗ ಅಹುಜಾ ಹೇಳಿದ್ದಾರೆ. ಆದರೆ, ಗೋವುಗಳ ಹತ್ಯೆಗೂ, ಭೂಕುಸಿತಕ್ಕೂ ಹೇಗೆ ನಂಟಿದೆ ಎಂಬುದನ್ನು ಅವರು ವಿವರಿಸಿಲ್ಲ.