February 4, 2026
IMG-20251101-WA0191

ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ ಗೇಟ್ ಬಳಿ ಶನಿವಾರ ಮೃತದೇಹ ಪತ್ತೆಯಾದ ರೌಡಿ ಶೀಟರ್ ನೌಫಾಲ್ ಯಾನೆ ಟೋಪಿ ನೌಫಾಲ್ (38)ನ ಸಾವು ರೈಲು ಹೊಡೆದು ಸಂಭವಿಸಿರುವ ಸಾಧ್ಯತೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ.

ನೌಫಾಲ್ ಸಾವು ಕೊಲೆಯಾಗಿದೆ ಎಂದು ನಂಬುವ ಯಾವುದೇ ಪುರಾವೆಗಳು ಇಲ್ಲಿಯ ತನಕ ದೊರೆತಿಲ್ಲ. ತನಿಖೆ ನಡೆಯುತ್ತಿದೆ ಎಂದು ಮಂಜೇಶ್ವರ ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ. ಈ ಮೂಲಕ ನೌಫಾಲ್ ಸಾವು ಇನ್ನಷ್ಟು ನಿಗೂಢತೆ ಪಡೆದುಕೊಂಡಿದೆ.

ಮಂಜೇಶ್ವರ ಪೊಲೀಸರು ನೌಫಾಲ್ ಆಪ್ತರು ಮತ್ತು ಅಂದು ಮೊಬೈಲ್ ಸಂಪರ್ಕದಲ್ಲಿದ್ದ ವ್ಯಕ್ತಿಗಳಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ. ನೌಫಾಲ್ ತೀವ್ರ ರೀತಿಯ ಡ್ರಗ್ಸ್ ವ್ಯಸನಿಯಾಗಿದ್ದು ಸಿರಿಂಜ್ ಗಳಲ್ಲಿ ಡ್ರಗ್ಸ್ ಸೇವನೆ ಮಾಡದೇ ಇದ್ದರೆ ಹಾಗೇ ಉಳಿದುಕೊಳ್ಳುವುದೇ ಸಾಧ್ಯ ಇಲ್ಲ ಎನ್ನುವಷ್ಟರ ಮಟ್ಟಿಗೆ ತಲುಪಿದ್ದ. ಶುಕ್ರವಾರ ಸಂಜೆ ಮಂಗಳೂರಿನಲ್ಲಿ ತನ್ನ ಆಪ್ತರ ಜೊತೆಗಿದ್ದ ನೌಫಾಲ್ ಅದೇ ದಿನ ರಾತ್ರಿ ತನ್ನ ಸ್ಕೂಟರಿನಲ್ಲಿ ಉಪ್ಪಳಕ್ಕೆ ತೆರಳಿರುವುದು ಸಿಸಿಟಿವಿ ತನಿಖೆಯಲ್ಲಿ ಪತ್ತೆಯಾಗಿದೆ. ಅಲ್ಲದೆ, ಮೃತದೇಹದ ಜೊತೆಗಿದ್ದ ಪ್ಯಾಂಟ್ ಕಿಸೆಯಲ್ಲೂ ಸಿರಿಂಜ್ ಗಳಿದ್ದವು ಎನ್ನುವ ಮಾಹಿತಿ ಇದೆ.

ಉಪ್ಪಳ ಗೇಟ್ ಬಳಿ ತಡರಾತ್ರಿ ಡ್ರಗ್ಸ್ ಪಡೆದಿದ್ದ ಎನ್ನುವ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದು ಡ್ರಗ್ಸ್ ತಲುಪಿಸಿದ್ದು ಯಾರೆನ್ನುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಡ್ರಗ್ಸ್ ಪಡೆದ ಬಳಿಕ ರೈಲ್ವೇ ಹಳಿಯಲ್ಲೇ ಕುಳಿತಿದ್ದನೇ ಅಥವಾ ಅಮಲಿನಲ್ಲಿ ನಿಂತುಕೊಂಡಿದ್ದಾಗಲೇ ರೈಲು ಬಡಿದು ಹೋಗಿದೆಯಾ ಎನ್ನುವುದು ಖಚಿತವಾಗಿಲ್ಲ. ಈ ಅಂಶಗಳನ್ನು ಆಧರಿಸಿ ಮಂಜೇಶ್ವರ ಪೊಲೀಸರು ನೌಫಾಲ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳುತ್ತಿದ್ದಾರೆ.

ಮಂಗಳೂರಿನಲ್ಲಿ ಡ್ರಗ್ಸ್ ವಿರುದ್ಧ ಪೊಲೀಸರ ಕಾರ್ಯಾಚರಣೆ ಹೆಚ್ಚಿದ ಬಳಿಕ ವ್ಯಸನ ಅಂಟಿಸಿಕೊಂಡವರು ಡ್ರಗ್ಸ್ ಸಿಗದೆ ಚಡಪಡಿಸುತ್ತಿದ್ದಾರೆ. ನೌಫಾಲ್ ಅದೇ ಕಾರಣಕ್ಕೆ ಅಂದು ನಡುರಾತ್ರಿಯಲ್ಲೇ ನಟೋರಿಯಸ್ ರೌಡಿಯಾಗಿದ್ದರೂ ಅದ್ಯಾವುದರ ಅಳುಕೇ ಇಲ್ಲದೆ ಮಂಗಳೂರಿನ ಬಜಾಲಿನಿಂದ ಉಪ್ಪಳಕ್ಕೆ ಸ್ಕೂಟರಿನಲ್ಲೇ ತೆರಳಿದ್ದ ಎನ್ನಲಾಗುತ್ತಿದೆ. ಅಲ್ಲಿಂದ ಪತ್ನಿಗೂ ಕರೆ ಮಾಡಿದ್ದು ಇನ್ನು ಡ್ರಗ್ಸ್ ಚಟವನ್ನು ಬಿಟ್ಟು ಬಿಡುತ್ತೇನೆ ಎಂದೂ ಹೇಳಿದ್ದ ಎನ್ನಲಾಗಿದೆ.