February 4, 2026
750x450_426148-karnataka-high-court-on-perjury-prosecution-pursuing-perjury-charges-when-a-prima-facie-deliberate-intention-is-disclosed

ಬೆಂಗಳೂರು: ಈ ತಿಂಗಳ ಅಂತ್ಯಕ್ಕೆ ಅವಧಿ ಕೊನೆಗೊಳ್ಳಲಿರುವ ರಾಜ್ಯದ 180ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್​ವಾರು ಮೀಸಲಾತಿಯ ಅಂತಿಮ ಅಧಿಸೂಚನೆ ಹೊರಡಿಸಲು 150 ದಿನಗಳ ಸಮಯ ಅಗತ್ಯವಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮಾಹಿತಿ ನೀಡಿದೆ.

ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಲು ವಿಳಂಬವಾದ ಹಿನ್ನೆಲೆಯಲ್ಲಿ 16 ತಿಂಗಳ ಕಾಲ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದ್ದ ಅವಧಿಯನ್ನು ತಮ್ಮ ಐದು ವರ್ಷದ ಅಧಿಕಾರವಧಿಗೆ ಪರಿಗಣಿಸಬಾರದು ಹಾಗೂ ಅವಧಿ ಮುಗಿಯಲಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳ ನೇಮಕ ಮಾಡುವ ಕ್ರಮಕ್ಕೆ ಮುಂದಾಗದಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ 65ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸಿದ್ದರು.

ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು. ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ, ಅವಧಿ ಮುಗಿಯಲಿರುವ ಸುಮಾರು 188 ನಗರ ಸ್ಥಳೀಯ ಸಂಸ್ಥೆಗಳಿಗೆ ವಾರ್ಡ್ ವಾರು ಮೀಸಲಾತಿ ನಿಗದಿಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಲು ಕನಿಷ್ಠ 150 ದಿನಗಳು ಬೇಕಾಗುತ್ತದೆ ಎಂದು ನ್ಯಾಯಾಲಯಕ್ಕೆ ಲಿಖಿತ ಹೇಳಿಕೆ ಸಲ್ಲಿಸಿದರು. ಅದರಂತೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲಾತಿ ಜತೆಗೆ ಕೆಲವು ಸ್ಥಳೀಯ ಸಂಸ್ಥೆಗಳ ವಾರ್ಡ್ ಗಳನ್ನು ಪುನರ್ ವಿಂಗಡಣೆ ಮಾಡಬೇಕಿದೆ.

ಮೊದಲು ಕರಡು ಹೊರಡಿಸಿ, ಆಕ್ಷೇಪಣೆಗಳಲ್ಲಿ ಆಹ್ವಾನಿ ಅವುಗಳನ್ನು ಇತ್ಯರ್ಥಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಬೇಕಾಗುತ್ತದೆ. ಇದಕ್ಕೆ ಸಮಯ ಹಿಡಿಯುತ್ತದೆ. ಆದ್ದರಿಂದ 150 ದಿನಗಳು ಬೇಕಾಗುತ್ತದೆ. ಮೀಸಲಾತಿ ಅಂತಿಮ ಅಧಿಸೂಚನೆ ಬಳಿಕ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು. ಬಳಿಕ ಆಯೋಗ ಮುಂದಿನ ಪ್ರಕ್ರಿಯೆ ಪ್ರಾರಂಭಿಸಬಹುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಆಕ್ಷೇಪಿಸಿದ ಆಯೋಗದ ಪರ ವಕೀಲರು: ಇದಕ್ಕೆ ಆಕ್ಷೇಪಿಸಿದ ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ, ಸ್ಥಳೀಯ ಸಂಸ್ಥೆಗಳಿಗೆ ಕಾಲಮಿತಿಯೊಳಗೆ ಚುನಾವಣೆ ನಡೆಸುವ ಹಾಗೂ ಅವಧಿ ಮುಗಿದ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ಮಾಡುವ ವಿಚಾರದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಸಕಾಲಕ್ಕೆ ಚುನಾವಣೆ ನಡೆಸದೇ ಸುದೀರ್ಘ ಅವಧಿಗೆ ಸ್ಥಳೀಯ ಸಂಸ್ಥೆಗಳನ್ನು ಖಾಲಿ ಇಡುವುದು, ಮಿತಿಗಿಂತ ಹೆಚ್ಚು ಅವಧಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವುದು ಸಂವಿಧಾನ ಮತ್ತು ಕಾಯ್ದೆಗೆ ವಿರುದ್ಧವಾಗಿದೆ. ಕೆಲವು ನಗರ ಸ್ಥಳೀಯ ಸಂಸ್ಥೆಗಳಿಗಷ್ಟೇ ವಾರ್ಡ್ ಪುನರ್ ವಿಂಗಡಣೆ ಮಾಡಬೇಕಿದೆ. ಇದು ಮುಗಿಸಿ ಸರ್ಕಾರ ಮೀಸಲಾತಿ ನಿಗದಿ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ, ಅದರ ಜೊತೆ ಜೊತೆಯಾಗಿ ಆಯೋಗ ಮತದಾರರ ಪಟ್ಟಿ ತಯಾರಿಸಲು ಅನುಮತಿ ನೀಡಬೇಕು ಎಂದು ಕೋರಿದರು.

ಅರ್ಜಿದಾರರರೊಬ್ಬರ ಪರ ವಕೀಲರ ವಾದ ಏನು?: ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್. ಬಸವರಾಜ್, ವಾರ್ಡ್ ಮರು ವಿಂಗಡಣೆ ಮಾಡಲು, ಮೀಸಲಾತಿ ನಿಗದಿಪಡಿಸಲು ತಮ್ಮದೇನು ಅಡ್ಡಿಯಿಲ್ಲ. ಒಂದೊಮ್ಮೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದೇ ಆದಲ್ಲಿ, ಎಲ್ಲಾ ಅರ್ಜಿದಾರರು ತಮ್ಮ ಮನವಿಯಿಂದ ಹಿಂದೆ ಸರಿಯಲಿದ್ದಾರೆ. ಆದರೆ, ಅಸಲಿಗೆ ಸರ್ಕಾರಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಯೇ ಬೇಕಿಲ್ಲ. ಆದಷ್ಟು ಬೇಗ ಸ್ಥಳೀಯ ಸಂಸ್ಥೆಗಳನ್ನು ಆಡಳಿತಾಧಿಕಾರಿಗಳ ವಶಕ್ಕೆ ಒಪ್ಪಿಸುವ ಉದ್ದೇಶ ಸರ್ಕಾರ ಹೊಂದಿದೆ. ಆಡಳಿತಾಧಿಕಾರಿಗಳ ನೇಮಕಕ್ಕೆ ಸರ್ಕಾರ ಯಾಕಿಷ್ಟು ಆತುರಪಡುತ್ತಿದೆ ಅಂತ ಅರ್ಥ ಆಗುತ್ತಿಲ್ಲ. ಈಗಾಗಲೇ ಬಿಬಿಎಂಪಿಗೆ ಏಳೆಂಟು ವರ್ಷಗಳಿಂದ ಚುನಾವಣೆ ನಡೆದಿಲ್ಲ, ಪಂಚಾಯಿತಿಗಳಿಗೆ ನಾಲ್ಕು ವರ್ಷಗಳಿಂದ ಚುನಾವಣೆ ಆಗಿಲ್ಲ. ಈಗ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ಮಾಡಿದರೆ, ಕನಿಷ್ಟ ಒಂದು ವರ್ಷದ ತನಕ ಸರ್ಕಾರ ಚುನಾವಣೆ ನಡೆಸುವುದಿಲ್ಲ ಎಂದು ಪೀಠಕ್ಕೆ ವಿವರಿಸಿದರು.

ಸರ್ಕಾರ ಮತ್ತು ಚುನಾವಣಾ ಆಯೋಗದ ವಾದ ಆಲಿಸಿದ ನ್ಯಾಯಪೀಠ, ನಗರ ಸ್ಥಳೀಯ ಸಂಸ್ಥೆಗಳಿಗೆ ಯಾವಾಗ ಚುನಾವಣೆ ನಡೆಸುತ್ತೀರಿ, ಅದಕ್ಕೂ ಮೊದಲು ವಾರ್ಡ್ ಪುನರ್ ವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆ ನಿರ್ದಿಷ್ಠವಾಗಿ ಯಾವ ಕಾಲಮಿತಿಯಲ್ಲಿ ಮುಗಿಯಲಿದೆ. ಈ ಪ್ರಕ್ರಿಯೆ ನಡೆಯುತ್ತಿರುವಾಗಲೇ ಚುನಾವಣಾ ಆಯೋಗ ಮತದಾರರ ಪಟ್ಟಿ ತಯಾರಿಸುವ ಕಾರ್ಯ ನಡೆಸಬಹುದೇ ಎಂಬ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಬುಧವಾರ (ನ.5)ರಂದು ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಸಭೆ ನಡೆಸಿ ಅದರ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಿತು