March 21, 2026
448-252-22824271-thumbnail-16x9-don

ಅಮೆರಿಕ : ಅಮೆರಿಕ ಅಧ್ಯಕ್ಷೀಯ ಚುನಾವಣೆ ಇಂದು(ಮಂಗಳವಾರ) ನಡೆಯಲಿದ್ದು, ರಿಪಬ್ಲಿಕನ್ ಪಾರ್ಟಿ ನಾಯಕ ಡೊನಾಲ್ಡ್ ಟ್ರಂಪ್​ ಗೆಲ್ಲುತ್ತಾರಾ ಅಥವಾ ಭಾರತೀಯ ಮೂಲದವರಾದ ಡೆಮಾಕ್ರೆಟಿಕ್ ಪಾರ್ಟಿ ಅಭ್ಯರ್ಥಿ, ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಗೆಲ್ಲುತ್ತಾರಾ ಎಂಬುದು ನಿರ್ಧಾರವಾಗಲಿದೆ. ಇಬ್ಬರ ನಡುವೆ ತುರುಸಿನ ಪೈಪೋಟಿ ನಡೆದಿದೆ. ಮತದಾನಕ್ಕೆ ಒಂದು ದಿನ ಮುಂಚೆ ಉಭಯ ಸ್ಪರ್ಧಿಗಳು ಕೊನೆಯ ಹಂತದ ಬಿರುಸಿನ ಪ್ರಚಾರ ನಡೆಸಿದರು.

ಅಮೆರಿಕದಲ್ಲಿ ಬೆಳಗ್ಗೆ 7 ರಿಂದ 9 ಗಂಟೆಯ ನಡುವೆ ಮತದಾನ ಆರಂಭವಾಗಲಿದೆ. ಇದು ಭಾರತೀಯ ಕಾಲಮಾನದ ಪ್ರಕಾರ, ಸಂಜೆ 4.30 ಆಗಿರುತ್ತದೆ. ಅಲ್ಲಿ ಸಂಜೆ 6ಕ್ಕೆ ಮತದಾನ ಮುಕ್ತಾಯವಾದರೆ, ಭಾರತದಲ್ಲಿ ಬೆಳಗ್ಗೆ 4.30ರ ಸಮಯವಾಗಿರುತ್ತದೆ.

ಡೆಮಾಕ್ರಟಿಕ್​ ಪಕ್ಷದ ಅಭ್ಯರ್ಥಿಯಾದ ಕಮಲಾ ಹ್ಯಾರಿಸ್ ಅವರು ಸೋಮವಾರ ಪೂರ್ತಿ ಪೆನ್ಸಿಲ್ವೇನಿಯಾದಲ್ಲಿ ಕಳೆದರು. ಚುನಾವಣಾ ಫಲಿತಾಂಶವನ್ನು ಬದಲಿಸುವ ರಾಜ್ಯಗಳಲ್ಲಿ ಒಂದಾದ ಇಲ್ಲಿಯೇ ಅವರು ಹೆಚ್ಚು ಪ್ರಚಾರ ನಡೆಸಿದರು. ಅಲೆನ್‌ಟೌನ್ ಸೇರಿದಂತೆ ಕಾರ್ಮಿಕ ವರ್ಗದ ಪ್ರದೇಶಗಳಿಗೆ ಭೇಟಿ ನೀಡಿದರು. ಲೇಡಿ ಗಾಗಾ ಮತ್ತು ಓಪ್ರಾ ವಿನ್‌ಫ್ರೇ ಅವರನ್ನು ಒಳಗೊಂಡ ತಂಡವು ತಡರಾತ್ರಿ ಫಿಲಡೆಲ್ಫಿಯಾ ರ‍್ಯಾಲಿಯಲ್ಲಿ ಕಾಣಿಸಿಕೊಂಡರು.

ರಿಪಬ್ಲಿಕನ್​ ಪಕ್ಷದ ಸ್ಪರ್ಧಾಳುವಾದ ಡೊನಾಲ್ಡ್ ಟ್ರಂಪ್ ಉತ್ತರ ಕೆರೊಲಿನಾ, ಪೆನ್ಸಿಲ್ವೇನಿಯಾ, ಪಿಟ್ಸ್‌ಬರ್ಗ್‌ನಲ್ಲಿ ರ‍್ಯಾಲಿಗಳನ್ನು ಹಮ್ಮಿಕೊಂಡರು. ಮಾಜಿ ಅಧ್ಯಕ್ಷರು ಮಿಚಿಗನ್‌ನ ಗ್ರ್ಯಾಂಡ್ ರಾಪಿಡ್ಸ್‌ನಲ್ಲಿ ಸೋಮವಾರ ತಡರಾತ್ರಿ ಕಾರ್ಯಕ್ರಮದೊಂದಿಗೆ ತಮ್ಮ ಪ್ರಚಾರ ಕೊನೆಗೊಳಿಸಲಿದ್ದಾರೆ. ಸುಮಾರು 77 ಮಿಲಿಯನ್ ಅಮೆರಿಕನ್ನರು ಈಗಾಗಲೇ ಮೊದಲೇ ಮತ ಚಲಾಯಿಸಿದ್ದಾರೆ.

ಚುನಾವಣೆಯಲ್ಲಿ ಟ್ರಂಪ್ ಗೆಲುವು ಸಾಧಿಸಿದಲ್ಲಿ ಹಲವು ಪ್ರಕರಣಗಳಲ್ಲಿ ದೋಷಾರೋಪ ಹೊತ್ತು ಅಧ್ಯಕ್ಷರಾದ ಮೊದಲಿಗ ಎನ್ನಿಸಿಕೊಳ್ಳಲಿದ್ದಾರೆ. ಈ ಮೂಲಕ ತನ್ನ ಮೇಲಿನ ಬಾಕಿ ಕೇಸ್​ಗಳನ್ನು ಕೊನೆಗೊಳಿಸುವ ಅಧಿಕಾರವನ್ನೂ ಪಡೆಯಲಿದ್ದಾರೆ. ಕಮಲಾ ಅವರು ಗೆಲುವು ಸಾಧಿಸಿದಲ್ಲಿ ಮೊದಲ ಕಪ್ಪು ಮಹಿಳೆ ಮತ್ತು ದಕ್ಷಿಣ ಏಷ್ಯಾ ಮೂಲದ ಮೊದಲ ವ್ಯಕ್ತಿಯಾಗಲಿದ್ದಾರೆ.