ಬಂಟ್ವಾಳ(ನ.05): ದೇವಸ್ಥಾನದ ಬಾಗಿಲು ಮುರಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಕಳವು ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಎಂಬಲ್ಲಿ ಇಂದು(ಮಂಗಳವಾರ) ನಡೆದಿದೆ.
ಕಳ್ಳತನದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮುಂಜಾನೆ 4 ಗಂಟೆಗೆ ದೇವಸ್ಥಾನದ ಬಾಗಿಲು ಮುರಿದು ನೂರಾರು ವರ್ಷಗಳ ಹಳೆಯದಾದ ಒಂದೂವರೆ ಕೆ.ಜಿ.ತೂಕದ ಬೆಳ್ಳಿಯ ದೇವರ ಪೀಠ, ಬಂಗಾರದ ದೇವರ ಮೂಗುತಿ, ದೇವರ ಕೊಡೆ ಸೇರಿ ಒಟ್ಟು 2 ಕೆ.ಜಿ.ಯಷ್ಟು ಬೆಳ್ಳಿ ಹಾಗೂ 3 ಪವನ್ ಚಿನ್ನ ಕಳವು ಜೊತೆಗೆ ಕಾಣಿಕೆ ಹುಂಡಿಯಲ್ಲಿದ್ದ 2.30 ಲಕ್ಷ ನಗದು ಎಗರಿಸಿದ್ದಾರೆ ಕಳ್ಳರು.
ಸುಮಾರು 5 ಜನರ ತಂಡ ಈ ಕಳ್ಳತನದಲ್ಲಿ ಭಾಗಿಯಾಗಿರುವುದು ಸಿ.ಸಿ.ಕ್ಯಾಮರಾದಲ್ಲಿ ಕಂಡುಬಂದಿದೆ.ಸ್ಥಳಕ್ಕೆ ಬಂಟ್ವಾಳ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ ಹರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚುತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.