ಬೆಂಗಳೂರು: ಬೆಂಗಳೂರಿನಲ್ಲಿ 8 ತಿಂಗಳ ಹಾಗೂ 3 ತಿಂಗಳ ಮಗುವಿನಲ್ಲಿ ಎಚ್ಎಂಪಿವಿ (HMPV) ವೈರಸ್ ದೃಢಪಟ್ಟಿದೆ. ಮೊದಲನೆಯ ಪ್ರಕರಣದಲ್ಲಿ 8 ತಿಂಗಳ ಮಗುವಿಗೆ ಜ್ವರ ಬಂದ ಕಾರಣ ಕೆಲವು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ರಕ್ತ ಪರೀಕ್ಷೆ ಮಾಡಿಸಿದಾಗ HMPV ವೈರಸ್ ಇರುವುದು ಪತ್ತೆಯಾಗಿದೆ. ಆದರೆ, ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಮಾಹಿತಿ ನೀಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಮೂರು ತಿಂಗಳ ಹೆಣ್ಣು ಶಿಶುವಿನಲ್ಲಿಯೂ ವೈರಸ್ ದೃಢಪಟ್ಟಿದೆ. ಆದರೆ, ಶಿಶುವನ್ನು ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರೋಗ್ಯ ಇಲಾಖೆ ಹೇಳಿದ್ದೇನು?
ಎಚ್ಎಂಪಿವಿ ವೈರಸ್ ಭಾರತದಲ್ಲೂ ಇದೆ. ಆದರೆ, ಅದು ಮ್ಯೂಟೆಷನ್ ಆಗಿದೆಯಾ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ. ನಮಗೆ ಚೀನಾದಲ್ಲಿ ಮ್ಯುಟೇಟ್ ಆಗಿರುವ ವೈರಸ್ ಹೇಗಿದೆ ಎಂದು ತಿಳಿದಿಲ್ಲ. ಹೀಗಾಗಿ ಇಲ್ಲಿ ಪತ್ತೆಯಾಗಿರುವುದು ಸಾಮಾನ್ಯ HMPV ವೈರಸ್ಸೇ ಅಥವಾ ಚೀನಾದ ತಳಿಯಾ ಎಂಬ ಗೊಂದಲ ಇದೆ. ಭಾರತದಲ್ಲೂ ಸಾಮಾನ್ಯ HMPV ವೈರಸ್ ಶೇ 0.78 ರಷ್ಟು ಕಾಣಿಸುತ್ತದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ತಿಳಿಸಿದ್ದಾರೆ.
ಏನಿದು HMPV ವೈರಸ್?
ಸದ್ಯ ಚೀನಾದಲ್ಲಿ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿರುವ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಅಥವಾ ಎಚ್ಎಂಪಿವಿ ಹೊಸದೇನಲ್ಲ. ಇದನ್ನು ಮೊದಲು 2001 ರಲ್ಲಿ ಕಂಡುಹಿಡಿಯಲಾಯಿತು ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಹೇಳಿದೆ. ಆದಾಗ್ಯೂ, ಕೆಲವು ಸೆರೋಲಾಜಿಕ್ ಪುರಾವೆಗಳು ವೈರಸ್ 1958 ರಿಂದಲೇ ವ್ಯಾಪಕವಾಗಿ ಹರಡಿತ್ತು ಎಂಬುದನ್ನು ನಿರೂಪಿಸಿರುವುದಾಗಿ ತಜ್ಞರು ಹೇಳಿದ್ದಾರೆ.
