February 4, 2026
IMG-20251206-WA0018

ಮಂಗಳೂರು: ನಿಷೇಧಿತ ಪಾಪ್ಯುಲರ್‌ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯು ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ಕಾರ್ಯಕರ್ತರ ಸೋಗಿನಲ್ಲಿ ಚುನಾ ವಣ ವ್ಯವಸ್ಥೆಯೊಳಗೆ ಮರುಪ್ರವೇಶಕ್ಕೆ ಪ್ರಯತ್ನಿಸುತ್ತಿದೆ ಎಂದು ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರು ಶುಕ್ರವಾರ ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಪ್ರಸ್ತಾವಿಸಿದರು.

ಜಾರಿ ನಿರ್ದೇಶನಾಲಯದ 2025ರ ನವೆಂಬರ್‌ 8ರ ಪ್ರಕಟನೆಯನ್ನು ಉಲ್ಲೇಖೀಸಿದ ಅವರು, ಎಸ್‌ಡಿಪಿಐಯು ನಿಷೇಧಿತ ಪಿಎಫ್‌ಐನ ರಾಜಕೀಯ ಮುಖವಾಣಿ. ಪಿಎಫ್‌ಐಯು ಎಸ್‌ಡಿಪಿಐನ ರಾಜಕೀಯ ಕಾರ್ಯ ಚಟುವಟಿಕೆಗಳನ್ನು ನಿಯಂತ್ರಿಸುವ ಜತೆಗೆ ಫಂಡಿಂಗ್‌ ಮಾಡುತ್ತಿದೆ ಎಂದು ಇ.ಡಿ. ಉಲ್ಲೇಖೀಸಿದೆ. ಹೀಗಿರುವಾಗ, ಪಿಎಫ್‌ಐ ಚುನಾವಣೆಯ ಮೇಲೆ ಪ್ರಭಾವ ಬೀರಲು ಬಳಸುವ ಯಾವುದೇ ಗುಪ್ತ ಮಾರ್ಗವು ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುತ್ತದೆ ಎಂದರು.

ಜಿಲ್ಲೆಯಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸದನದ ಗಮನ ಸೆಳೆದ ಅವರು, ಕರಾವಳಿ ಕರ್ನಾಟಕದ ಪ್ರದೇಶಗಳು ಪಿಎಫ್‌ಐ ಸಂಘಟನೆಯ ದುಷ್ಕೃತ್ಯಗಳಿಂದ ಸಾಕಷ್ಟು ತೊಂದರೆ ಅನುಭವಿಸಿದೆ. ಇತ್ತೀಚೆಗೆ ದಕ್ಷಿಣ ಕನ್ನಡದಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿಯ ಹತ್ಯೆ ನಡೆದಿದ್ದು, ಕೇಂದ್ರ ಗೃಹ ಸಚಿವರ ಸಕಾಲಿಕ ಮಧ್ಯಪ್ರವೇಶದಿಂದಾಗಿ ತನಿಖೆಯನ್ನು ಎನ್‌ಐಎ ನಡೆಸುತ್ತಿದೆ. ನಮ್ಮ ಪ್ರದೇಶವು ಇಂಥಹ ದುಷ್ಟ ಶಕ್ತಿಗಳ ಆಕ್ರಮಣಕ್ಕೆ ನಿರಂತರ ತುತ್ತಾಗುವ ಅಪಾಯವಿದೆ ಎಂಬುದಕ್ಕೆ ಈ ಕೊಲೆ ಪ್ರಕರಣ ಒಂದು ನಿದರ್ಶನ ಎಂದರು.

ನಿಷೇಧಿತ ಸಂಘಟನೆಗಳು ಹೊಸ ರೂಪದಲ್ಲಿ ತನ್ನ ಚಟುವಟಿಕೆ ಮುಂದುವರಿಸಲು ಅಥವಾ ರಾಜಕೀಯ ಪಕ್ಷಗಳನ್ನು ಮುಂದಿಟ್ಟು ಚುನಾವಣಾ ನ್ಯಾಯಸಮ್ಮತತೆ ಪಡೆಯುವ ಯತ್ನವನ್ನು ನಿಯಂತ್ರಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಚೌಟ ಒತ್ತಾಯಿಸಿದರು.