ಸುರತ್ಕಲ್: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯೊಬ್ಬನನ್ನು ಸುರತ್ಕಲ್ ಪೊಲೀಸರು ಬಂಧಿಸಿ ಪೋಕ್ಸೋ ಕೇಸು ದಾಖಲಿಸಿದ್ದಾರೆ.

ಸುರತ್ಕಲ್ ಬಳಿಯ ಚೊಕ್ಕಬೆಟ್ಟು ಜುಮ್ಮಾ ಮಸೀದಿ ಬಳಿಯಿರುವ ಹನಿ ಫ್ಯಾಶನ್ ಶಾಪ್, ಜನರಲ್ ಸ್ಟೋರ್ ಅಂಗಡಿ ಮಾಲಕ ಮೊಹಮ್ಮದ್ ಇಸ್ಮಾಯಿಲ್ ಬಂಧಿತ ಆರೋಪಿ.
6ನೇ ತರಗತಿ ಬಾಲಕ ಶನಿವಾರ ಚಾಕೊಲೇಟ್ ಖರೀದಿಸಲು ಹೋದಾಗ ಅಂಗಡಿಯಲ್ಲಿರುವ ರೂಂವೊಂದರಲ್ಲಿ ಕೂಡಿ ಹಾಕಿ ಬಾಲಕನ ಕೈ-ಕಾಲನ್ನು ಹಗ್ಗದಿಂದ ಕಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.
ನೊಂದ ಬಾಲಕನ ತಾಯಿ ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆ ಕಲಂ 351(2), 127(2) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಿಕೊಂಡು ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಅವರ ತಂಡ ಕೂಡಲೇ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿ ರವಿವಾರ (ಡಿ.7) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈತ ರಾಜಕೀಯ ಪಕ್ಷವೊಂದರ ಸ್ಥಳೀಯ ಮುಖಂಡ ಎಂದು ತಿಳಿದು ಬಂದಿದೆ.
