March 21, 2026
IMG-20251110-WA0248

ಮಂಗಳೂರು : ರಾಷ್ಟ್ರಗಾನ ಜನಮಣಗನ ಗೀತೆಯನ್ನು ಬ್ರಿಟೀಷ್ ದೊರೆಯ ಸ್ವಾಗತಕ್ಕೆ ರಚಿಸಲಾಗಿತ್ತು ಎಂದಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋ಼ಷ್ಠಿ ನಡೆಸಿ ಮಾತನಾಡಿದ ಅವರು, ರಾಷ್ಟ್ರಗಾನವನ್ನು ಗೌರವಿಸುವುದು ಸಂವಿಧಾನ ವಹಿಸಿರುವ ಮೂಲಭೂತ ಕರ್ತವ್ಯವಾಗಿದ್ದು, ಜವಾಬ್ದಾರಿಯುತ ಜನಪ್ರತಿನಿಧಿಯಾಗಿರುವ ಕಾಗೇರಿ ಸಂವಿಧಾನದ ಮೂಲಭೂತ ಕರ್ತವ್ಯಕ್ಕೆ ಚ್ಯುತಿ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಗಣಮನ ಗೀತೆಯನ್ನು 1911ರ ಕಲ್ಕತ್ತ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರಪ್ರಥಮ ಬಾರಿಗೆ ಸಾರ್ವಜನಿಕವಾಗಿ ಹಾಡಲಾಗಿತ್ತು. ಅದನ್ನು ಬ್ರಿಟೀಷರ ಸ್ವಾಗತಕ್ಕೆ ರಚಿಸಲಾಗಿದೆ ಎಂಬುದು ಇತಿಹಾಸಕ್ಕೆ ಮಾಡುವ ಅಪಚಾರವಾಗಿದೆ ಎಂದರು. ಜನಗಣಮನ ವ್ಯಕ್ತಿಯನ್ನು ಹೊಗಳುವ ಗಾನವಲ್ಲ, ದೇಶದ ಏಕತೆ ಐಕ್ಯತೆಯನ್ನು ಪ್ರತಿಧ್ವನಿಸುವ ಗೀತೆ ಎಂದು ನುಡಿದರು.

ಜನಗಣಮನ ಮತ್ತು ವಂದೇ ಮಾತರಂ ಗೀತೆ ನಡುವೆ ಭೇದಭಾವ ಉಂಟು ಮಾಡುವುದು ತಪ್ಪು ಎಂದ ಅವರು, ಕಾಂಗ್ರೆಸ್ ಪಕ್ಷ ಯಾವತ್ತೂ ವಂದೇ ಮಾತರಂ ಗೀತೆಗೆ ಅಗೌರವ ಮಾಡಿಲ್ಲ, ವಂದೇ ಮಾತರಂ ಗೀತೆ ಕಾಂಗ್ರೆಸ್ ಪಕ್ಷದ ಆತ್ಮದಂತಿದೆ, ಈಗಲೂ
ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆ ಹಾಡಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರದ ಹೆಗ್ಡೆ, ಜೋಕಿಂ‌ ಡಿಸೋಜಾ, ಕುಮಾರಿ ಅಪ್ಪಿ, ಪೃಥ್ವಿರಾಜ್, ಯೋಗೀಶ್, ಪದ್ಮನಾಭ, ಮಂಜುಳಾ ನಾಯಕ್, ಸುದರ್ಶನ್ ಜೈನ್, ಚಿತ್ತರಂಜನ್ ಶೆಟ್ಟಿ, ವಹಾಬ್ ಕುದ್ರೋಳಿ, ಟಿ.ಕೆ ಸುಧೀರ್, ಶಬೀರ್ ಸಿದ್ದಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.