ಮಂಗಳೂರು: ಕರಾವಳಿ ಬಾಗದಲ್ಲಿ ಅಶಾಂತಿಗೆ ಕಾರಣವಾದ ಪ್ರಚೋದಕಾರಿ ಭಾಷಣಗಳಿಗೆ ಬ್ರೇಕ್ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದ ಸ್ಪೀಕರ್ ಯುಟಿ ಖಾದರ್ ಅವರು, ಗೃಹ ಸಚಿವರ ಜೊತೆ ಈ ಬಗ್ಗೆ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಯುಟಿ ಖಾದರ್, ದ.ಕ. ಜಿಲ್ಲೆಯಲ್ಲಿ ನಡೆದಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಹಿಂದೆ ಇದ್ದ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹಾಗೂ ಎಸ್ಪಿ ವಿರುದ್ಧ ಉನ್ನತ ಮಟ್ಟದ ತನಿಖೆ ಆಗಬೇಕು. ಈ ಬಗ್ಗೆ ಗೃಹ ಸಚಿವರಿಗೆ ಪತ್ರ ಬರೆದು ಒತ್ತಾಯ ಮಾಡುವುದಾಗಿ ತಿಳಿಸಿದರು.
ಜಿಲ್ಲೆಗೆ ಬರುವ ಅಧಿಕಾರಿಗಳು ದ್ವೇಷ ಭಾಷಣ, ಗಲಾಟೆ ಆದಾಗ ಒಬ್ಬೊಬ್ಬರು ಒಂದೊಂದು ರೀತಿ ಆಡಳಿತ ಮಾಡುತ್ತಾರೆ. ಹಜ್ ಯಾತ್ರೆಗೆ ಹೋಗುವ ಮುನ್ನ ಕಮಿಷನರ್ ಹಾಗೂ ಎಸ್ಪಿ ಅವರಿಗೆ ದ್ವೇಷ ಭಾಷಣ, ಪ್ರಚೋದನಕಾರಿ ಬರಹ ಬರೆಯುವವರ ವಿರುದ್ದ ಕ್ರಮ ಕೈಗೊಳ್ಳಲು ಹೇಳಿದ್ದೆ. ಆಗ ಅವರು ಅಸಹಾಯಕತೆ ವ್ಯಕ್ತಪಡಿಸಿದ್ದರು. ನೀವು ಪೊಲೀಸರ ಕೆಲಸ ಮಾಡಿ, ಲಾಯರ್ ಕೆಲಸ ಮಾಡಬೇಡಿ ಅಂತ ಹೇಳಿದ್ದೆ. ಈಗ ನೂತನವಾಗಿ ಬಂದವರು ಕಠಿಣ ಕ್ರಮ ಕೈಗೊಂಡಿದ್ದಾರೆ. 60 ಪರ್ಸೆಂಟ್ ಎಲ್ಲವೂ ಸರಿಯಾಗಿದೆ ಎಂದರು.
ಮಂಗಳೂರಿನಲ್ಲಿ ಇತ್ತೀಚಿಗೆ ನಡೆದ ಘಟನೆಗಳು ಬೇಸರದ ವಿಚಾರವಾಗಿದೆ. ಇದು ಜಿಲ್ಲೆಯ ಸೌಹಾರ್ದತೆಗೆ ಒಂದು ಕಪ್ಪು ಚುಕ್ಕೆ. ನಮ್ಮ ಗುರಿ ಜಿಲ್ಲೆಯಲ್ಲಿ ಸೌಹಾರ್ದತೆ ಮೂಡಿಸುವಂತಾಗಿರಬೇಕು. ಭಿನ್ನಾಭಿಪ್ರಾಯ ಇರಬಾರದು ಎಂದಿಲ್ಲ. ಅದನ್ನು ಮಾತುಕತೆ ಮೂಲಕ ಬಗೆಹರಿಸಬೇಕು. ಇದು ಕೇವಲ ಜನಪ್ರತಿನಿಧಿಗಳಿಂದ ಮಾತ್ರ ಅಲ್ಲ ಪ್ರತಿಯೊಬ್ಬ ನಾಗರಿಕರು, ಸಂಘ ಸಂಸ್ಥೆಗಳ ಜವಾಬ್ಧಾರಿ ಕೂಡಾ ಇದೆ. ಜನಪ್ರತಿನಿಧಿಗಳು ಆಡುವ ಮಾತು ಸಮಾಜದ ಒಗ್ಗಟ್ಟಿಗಾಗಿ ಇರಬೇಕೇ ಹೊರತು ಸಮಾಜ ಒಡೆಯಲು ಅಲ್ಲ ಎಂದರು.
