ವಿಶ್ವವಿಖ್ಯಾತ ಪತ್ರಕರ್ತೆ ಹೋರಾಟಗಾರ್ತಿ ವಿಚಾರವಾದಿ ಗೌರಿ ಲಂಕೇಶ್ ಕೊಲೆ ಪ್ರಕರಣದ ಆರೋಪಿ ಶರತ್ ಬಾಹು ತಲಾಸ್ಕರ್ ಗೆ ಬೆಂಗಳೂರು ಸಿಟಿ ಸಿವಿಲ್ ಅಂಡ್ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದ ಪ್ರಕರಣವನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ ತೀವ್ರವಾಗಿ ಖಂಡಿಸುತ್ತದೆ.ಈ ಮೂಲಕ ಪ್ರಕರಣದಲ್ಲಿ ಬಂದಿತರಾಗಿದ್ದ ಎಲ್ಲ ಆರೋಪಿಗಳಿಗೆ ಜಾಮೀನು ದೊರೆತಿರುವುದು ತೀವ್ರ ಖಂಡನೀಯ.

“ವಿಚಾರಣೆ ಶೀಘ್ರದಲ್ಲಿ ಮುಕ್ತಾಯಗೊಳ್ಳುವ ಸಾಧ್ಯತೆ ಇಲ್ಲ” ಎಂಬ ಕಾರಣ ನೀಡಿ ಜಾಮೀನು ಮಂಜೂರು ಗೊಳಿಸಿರುವುದು ಸ್ವೀಕಾರಾರ್ಹವಲ್ಲ. ಶೀಘ್ರ ವಿಚಾರಣೆ ನಡೆಸಲು ನ್ಯಾಯಾಲಯಗಳು ಕಾರ್ಯಪ್ರವೃತ್ತ ರಾಗ ಬೇಕೆ ಹೊರತು ನ್ಯಾಯ ಪ್ರಕ್ರಿಯೆಯಲ್ಲಿ ನ್ಯಾಯಾಧೀಶರು ಈ ರೀತಿ ಕೈ ಚೆಲ್ಲಿ ಜಾಮೀನು ನೀಡುವುದು ಎಷ್ಟರ ಮಟ್ಟಿಗೆ ಸರಿ??
ಹಿಂದುತ್ವದ ಕಡು ವಿರೋಧಿ ಹೋರಾಟಗಾರ್ತಿಯಾಗಿದ್ದ ಪತ್ರಕರ್ತೆ ಗೌರಿ ಲಂಕೇಶರನ್ನು ಹಿಂದುತ್ವವಾದಿ ಸಂಘಟನೆ ಸನಾತನ ಸಂಸ್ಥೆಯ ಕಾರ್ಯಕರ್ತರು 2017 ಸೆಪ್ಟೆಂಬರ್ 5 ರಂದು ಗುಂಡಿಕ್ಕಿ ಹತ್ಯೆಗೈದಿದ್ದರು.ಪ್ರಕರಣದ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆ ಗೆ ಶರತ್ ತಲಾಸ್ಕರ್ ಬಂದೂಕು ತರಬೇತಿ ನೀಡಿದ್ದ ಎಂದು SIT ತನಿಖೆಯಿಂದ ತಿಳಿದುಬಂದಿದೆ.ಈತ ವಿಚಾರವಾದಿ ನರೇಂದ್ರ ದಾಬೋಲ್ಕರ್ ರನ್ನು ಗುಂಡಿಕ್ಕಿ ಕೊಂದ ಪ್ರಮುಖ ಆರೋಪಿ ಕೂಡ ಆಗಿದ್ದಾನೆ.ಸನಾತನ ಸಂಸ್ಥೆ ಬಿಡುಗಡೆಗೊಳಿಸಿದ “ಕ್ಷತ್ರ ಧರ್ಮ ಸಾಧನ” ಎಂಬ ಪುಸ್ತಕದಿಂದ ಇವರೆಲ್ಲರೂ ಪ್ರಭಾವಿತರಾಗಿದ್ದರು.
ಜನಪರ ಹೋರಾಟಗಾರರ ಸಾಲು ಸಾಲು ಜಾಮೀನು ಅರ್ಜಿಗಳು ಧೂಳು ಮುಕ್ಕುತ್ತಿದೆ. ಆದರೆ ಗೌರಿಹತ್ಯೆ ಆರೋಪಿಗಳಿಗೆ ಸುಲಭದಲ್ಲಿ ಜಾಮೀನು ದೊರಕುತ್ತಿರುವುದು ವಿಷಾದನೀಯ.ಗೌರಿಹತ್ಯೆ ಆರೋಪಿಗಳಿಗೆ ನೀಡಿರುವ ಜಾಮೀನು ಇವರಲ್ಲಿ ಇನ್ನಷ್ಟು ಕೊಲೆಗಳನ್ನು ನಡೆಸಲು ಧೈರ್ಯ ನೀಡಿದಂತಾಗುತ್ತದೆ. ಹಂತ ಹಂತವಾಗಿ ಎಲ್ಲಾ ಆರೋಪಿಗಳಿಗೆ ನೀಡಿರುವ ಈ ತರದ ಜಾಮೀನುಗಳು ಹೋರಾಟಗಾರರಿಗೆ ನೀಡುವ ಬೆದರಿಕೆಯಾಗಿದೆ.
ತಕ್ಷಣ ನ್ಯಾಯಾಲಯ ತನ್ನ ಜಾಮೀನು ಆದೇಶವನ್ನು ಪುನರ್ ಪರಿಶೀಲಿಸಬೇಕು.ಹಾಗೂ
ತಕ್ಷಣ ಈ ಬಗ್ಗೆ ಸರಕಾರ ಮೇಲ್ಮನವಿ ಸಲ್ಲಿಸಬೇಕು ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಒತ್ತಾಯಿಸುತ್ತದೆ ಎಂದು ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
