March 22, 2026
Screenshot_20250814_132415_Instagram

ಮಂಗಳೂರು: ಯುವತಿಯೊಂದಿಗೆ ಮಾತನಾಡುತ್ತಿದ್ದ ಯುವಕನ ಮೇಲೆ ನೈತಿಕ ಪೊಲೀಸ್‌ಗಿರಿ ನಡೆಸಿದ ಘಟನೆ ನಡೆದಿದೆ. ಘಟನೆ ಸಂಬಂಧ ಪಾಂಡೇಶ್ವರ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಗಣೇಶ್, ಶ್ರೇಯಸ್, ಚಿಂಟು, ಚಂದನ್, ನಾಗರಾಜ್ ಮತ್ತು ರಾಮಚಂದ್ರ ಬಂಧಿತ ಆರೋಪಿಗಳು. ಸೋಮವಾರ ಯುವತಿ ಹಾಗೂ ಯುವಕ ಮಂಗಳೂರಿನ ಸರ್ವಿಸ್ ಬಸ್ ನಿಲ್ದಾಣದ ಬಳಿ ಮಾತನಾಡುತ್ತ ಹೋಗುತ್ತಿದ್ದರು. ಈ ವೇಳೆ ಏಕಾಏಕಿ ಏಳೆಂಟು ಮಂದಿಯ ತಂಡ ತಡೆದು ಜೀವ ಬೆದರಿಕೆಯೊಡ್ಡಿದ್ದಾರೆ. ಈ ಬಗ್ಗೆ ಯುವತಿ ಪೊಲೀಸ್ ದೂರು ನೀಡಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್​ಪಿ ಮಾಹಿತಿ ನೀಡಿದ್ದಾರೆ.

ಘಟನೆಯ ವಿವರ : ನಗರದ ಪದವಿ ಪೂರ್ವ ಕಾಲೇಜೊಂದರ ವಿದ್ಯಾರ್ಥಿನಿಯಾದ ಯುವತಿ ಕಾಲೇಜು ಮುಗಿಸಿ ತನ್ನ ಗೆಳತಿಯೊಂದಿಗೆ ಸರ್ವೀಸ್ ಬಸ್ ನಿಲ್ದಾಣಕ್ಕೆ ಬಂದಿದ್ದಳು. ಬಳಿಕ ಗೆಳತಿ ಅಲ್ಲಿಂದ ಬಸ್‌ನಲ್ಲಿ ತನ್ನ ಮನೆಗೆ ತೆರಳಿದ್ದಳು. ಬಳಿಕ ವಿದ್ಯಾರ್ಥಿನಿಯು 3.30ರ ಸುಮಾರಿಗೆ ಅಲ್ಲಿಗೆ ಬಂದ ತನ್ನ ಸ್ನೇಹಿತೆಯ ಸಂಬಂಧಿಯಾದ ಬೇರೆ ಸಮುದಾಯದ ಯುವಕನೊಂದಿಗೆ ಮಾತನಾಡಿಕೊಂಡು ಹೋಗುತ್ತಿದ್ದಳು. ಈ ವೇಳೆ ಸುಮಾರು 7ರಿಂದ 8 ಮಂದಿ ಅಪರಿಚಿತರು ಅಡ್ಡಗಟ್ಟಿ, ಜೊತೆಗಿದ್ದ ಯುವಕನನ್ನು ತಡೆದಿದ್ದಾರೆ. ಅಲ್ಲದೆ “ಯುವಕನ ಜೊತೆ ಯಾಕೆ ಹೋಗುತ್ತಿದ್ದಿಯಾ?, ಏನು ಮಾತನಾಡುತ್ತಿದ್ದಿಯಾ?” ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.