ಬೆಂಗಳೂರು: ಗ್ರಾಮೀಣಾಭಿವೃದ್ಧಿ ಇಲಾಖೆಯ ಕೆಲವು ಸಿಬ್ಬಂದಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಈ ಬಗ್ಗೆ ವರದಿ ಕೇಳಿದ್ದು, ಅಂಥವರನ್ನು ಅಮಾನತು ಮಾಡಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ಸರ್ಕಾರಿ ನೌಕರರು ಕೆಲಸ ಮಾಡುತ್ತಾರೆ ಅಂದುಕೊಂಡಿದ್ದೇವೆ. ಆದರೆ, ಅವರು ನಮಗಿಂತಲೂ ಹೆಚ್ಚು ರಾಜಕೀಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸರ್ಕಾರಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಷಣ ಮಾಡುವುದಲ್ಲದೆ, ಬೇರೆ ರೀತಿಯಲ್ಲೂ ಪಾಲ್ಗೊಂಡಿದ್ದಾರೆ. ಇದರಲ್ಲಿ ನಮ್ಮ ಇಲಾಖೆಯ ಕೆಲವರಿದ್ದಾರೆ. ಈ ಸಂಬಂಧ ವರದಿ ತರಿಸಿಕೊಳ್ಳುತ್ತಿದ್ದು, ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ನಾನು ಯಾವತ್ತೂ ಒಂದು ಸಂಸ್ಥೆ ಅಂತ ಹೇಳಿಲ್ಲ. ಇಂತಹ ಯಾವುದೇ ಸಂಸ್ಥೆ ಇರಲಿ, 2013ರಲ್ಲಿ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಕಾರ್ಯಕ್ರಮ ನಡೆಸಬಾರದು ಎಂಬ ಸುತ್ತೋಲೆ ಹೊರಡಿಸಿದ್ದರು. ಹಲವು ಇಲಾಖೆಗಳು ಈ ಹಿಂದೆ ಈ ನಿಟ್ಟಿನಲ್ಲಿ ಆರ್ಡರ್ ಮಾಡಿವೆ. ಹಾಗಾಗಿ ಅವರು ಆರ್ಎಸ್ಎಸ್ ವಿರೋಧಿಗಳಾ?. ಇವತ್ತು ಹಲವು ಲೋಪಗಳಿವೆ, ಅದಕ್ಕಾಗಿಯೇ ಇವರೆಲ್ಲರೂ ಬೆಳೆದಿದ್ದಾರೆ. ಸರ್ದಾರ್ ಪಟೇಲ್, ಇಂದಿರಾ ಗಾಂಧಿ ಆರ್ಎಸ್ಎಸ್ ಬ್ಯಾನ್ ಮಾಡಲು ಸಾಧ್ಯವಾಗಿಲ್ಲ ಅಂತಾರೆ. ಹೌದು ಆವತ್ತು ನಿಷೇಧ ವಾಪಸ್ ಪಡೆದಿದ್ದು ಸರಿಯಲ್ಲ ಅಂತ ನಾವು ಹೇಳುತ್ತೇವೆ ಎಂದರು.
ಹಿಂದುತ್ವ ಯಾರು ತಂದಿದ್ದು?. ಸಾವರ್ಕರ್ ತಾನೇ ಹಿಂದುತ್ವ ತಂದಿದ್ದು. ಮೊದಲು ಎಲ್ಲರೂ ಹಿಂದೂ ಅಂತಾನೇ ಇತ್ತು. ಇವರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಿಂದುತ್ವ ತಂದರು. ಸಿದ್ದರಾಮಯ್ಯ ಸಾಹೇಬ್ರು ಅದನ್ನು ನಂಬದಿರಬಹುದು. ಡಿಸಿಎಂ ಸಾಹೇಬ್ರು ಬಹಳ ನಂಬುತ್ತಾರೆ. ಕೆಲವು ವಿಚಾರಗಳಲ್ಲಿ ನಾನು ನಂಬಲ್ಲ. ನಮ್ಮ ತಾಯಿ ನಂಬುತ್ತಾರೆ. ನನ್ನ ನಂಬಿಕೆ ಬೇರೆಯವರಿಗೆ ತೊಂದರೆ ಕೊಡಬಾರದು. ಸಂವಿಧಾನದ ಆಶಯಗಳಿಗೆ ಧಕ್ಕೆ ಬರಬಾರದು ಎಂಬುದಾಗಿದೆ ಎಂದು ತಿಳಿಸಿದರು.
ಅಲ್ಲದೆ, ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ ಈ ಹಿಂದೆ 2013ರಲ್ಲಿ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶದ ಪ್ರತಿಯನ್ನು ಹಂಚಿಕೊಂಡಿದ್ದಾರೆ. ಶಾಲೆಗಳು, ಶಾಲೆಗಳ ಆವರಣಗಳು ಯಾವುದೇ ಖಾಸಗಿ ಸಂಸ್ಥೆಗಳ ಕಾರ್ಯಕ್ರಮಗಳಿಂದ ಮುಕ್ತವಾಗಿರಬೇಕು, ಶಾಲೆಗಳು ಶಿಕ್ಷಣೇತರ ಚಟುವಟಿಕೆಗಳಿಂದ ಮುಕ್ತವಾಗಿರಬೇಕು. ಶಾಲೆಗಳ ಆವರಣವು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಮೀಸಲಿರಬೇಕು ಎಂದು ತನ್ನದೇ ಸರ್ಕಾರ ಹೊರಡಿಸಿದ ಆದೇಶ, ತಾವೇ ರೂಪಿಸಿದ ನಿಯಮಗಳ ಬಗ್ಗೆ ಬಿಜೆಪಿಗೆ ಅರಿವಿಲ್ಲವೇ? ಅಥವಾ ಈ ಆದೇಶ ಆರ್ಎಸ್ಎಸ್ ಗೆ ಅನ್ವಯಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
RSS ಸಂಘಟನೆಯು ಈ ದೇಶದ ಸಂವಿಧಾನ, ಕಾನೂನು, ನೀತಿ ನಿಯಮಗಳಿಗೆ ಅತೀತವಾಗಿದೆ ಎಂದು ಭಾವಿಸಿದೆಯೇ ಬಿಜೆಪಿ? ಈ ಆದೇಶ ಜಾರಿಯಲ್ಲಿದ್ದರೂ ಆರ್ ಎಸ್ ಎಸ್ ಎಂಬ ಸಂಘಟನೆಯು ಯಾವ ಅಂಜಿಕೆಯೂ ಇಲ್ಲದೆ ಶಾಲೆಗಳು ಹೆಡ್ಗೆವಾರ್ ಅವರ ವಂಶಸ್ಥರ ಆಸ್ತಿ ಎಂಬಂತಹ ಧೋರಣೆಯಲ್ಲಿ ತನ್ನ ಚಟುವಟಿಕೆ ನಡೆಸುತ್ತಿದೆ. ಕೂಗುಮಾರಿಗಳಂತೆ ಕೂಗುತ್ತಿರುವ ಬಿಜೆಪಿಯವರು ತಮ್ಮ ಸರ್ಕಾರದ ಆದೇಶವನ್ನು ಒಮ್ಮೆ ಅವಲೋಕನ ಮಾಡಿ ನಂತರ ತಾವೇನು ಮಾತಾಡಬೇಕು ಎಂದು ನಿರ್ಧರಿಸಲಿ ಎಂದು ಒತ್ತಾಯಿಸಿದ್ದಾರೆ.
