March 20, 2026
image (47)

ಮಂಗಳೂರು: ಕಮಿಷನರೆಟ್‌ ವ್ಯಾಪ್ತಿಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ದಿಢೀರ್‌ಪರೀಕ್ಷೆಯನ್ನು ಶುಕ್ರವಾರ ನಗರದ ಪೊಲೀಸರು ಕೈಗೊಂಡರು. ಸುಮಾರು 200 ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಿದ್ದು, ಎಲ್ಲರಲ್ಲೂ ನೆಗೆಟಿವ್‌ ವರದಿ ಬಂದಿದೆ.

ಸೆನ್‌ ಪೊಲೀಸ್‌ ಎಸಿಪಿ ಮತ್ತು ಮಂಗಳೂರು ನಗರ ದಕ್ಷಿಣ ವಿಭಾಗದ ಎಸಿಪಿ ನೇತೃತ್ವದಲ್ಲಿ ಪರೀಕ್ಷೆಗಳನ್ನು ನಡೆಸಲಾಯಿತು. ಕಾಲೇಜು ಬಸ್‌ಗಳನ್ನು ನಿಲ್ಲಿಸಿ, ಬಸ್ಸಿನಲ್ಲಿಯೇ ತಪಾಸಣೆ ಕೈಗೊಳ್ಳಲಾಯಿತು. ಕೊಣಾಜೆ ಠಾಣಾ ವ್ಯಾಪ್ತಿಯ ಒಂದೇ ಖಾಸಗಿ ಕಾಲೇಜಿನ ಎರಡು ಬಸ್‌ಗಳನ್ನು ನಿಲ್ಲಿಸಿ 87 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಎಲ್ಲರಲ್ಲೂ ನೆಗೆಟಿವ್‌ ವರದಿ ಬಂದಿದೆ. ಉಳಿದಂತೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ 103 ಮಂದಿಯನ್ನು ತಪಾಸಣೆಗೆ ಒಳಪಡಿಸಿದ್ದು, ನೆಗೆಟಿವ್‌ ಬಂದಿದೆ.

ಇದು ಬದಲಾವಣೆಯ ಚಿಹ್ನೆಯಾಗಿ ಗೋಚರಿಸಿದೆ. ಮುಂದಿನ ದಿನಗಳಲ್ಲಿಯೂ ಈ ಅಭಿಯಾನ ಮುಂದುವರಿಯಲಿದೆ. ಮಾದಕ ವಸ್ತು ಸೇವನೆಯನ್ನು ತಡೆಗಟ್ಟಲು ಮತ್ತು ಆರಂಭಿಕ ಹಂತದಲ್ಲೇ ವ್ಯಸನಿಗಳನ್ನು ಪತ್ತೆ ಹಚ್ಚಲು ಈ ಅಭಿಯಾನ ಸಹಕಾರಿಯಾಗಲಿದೆ. ಜತೆಗೆ ವ್ಯಸನಿಗಳಿಗೆ ತಪ್ಪು ತಿದ್ದಿಕೊಳ್ಳಲು ಮತ್ತು ಸೂಕ್ತ ಪುನರ್ವಸತಿ ಕೈಗೊಳ್ಳಲು ಕೂಡ ನೆರವಾಗಲಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.